ರಿಪ್ಪನ್ ಪೇಟೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜೆ ಎನ್ ಷಣ್ಮುಖಪ್ಪ ಗೌಡ ನಿಧನ :

ರಿಪ್ಪನ್ ಪೇಟೆ : ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜಯದೇವ ರೈಸ್ ಮಿಲ್ ನ ಮಾಲೀಕರಾದ ಜೆ ಎನ್ ಷಣ್ಮುಖಪ್ಪ ಗೌಡರು(99) ಇಂದು ರಿಪ್ಪನ್ ಪೇಟೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ ತಮ್ಮ ರಿಪ್ಪನ್ ಪೇಟೆಯ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೃತರು ಏಳು ಪುತ್ರರು,ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಸ್ವಾತಂತ್ರ್ಯ ಹೋರಾಟಗಾರ ಜೆ ಎನ್ ಷಣ್ಮುಖಪ್ಪ ಗೌಡರವರ ನೆನಪು

ರಿಪ್ಪನ್ ಪೇಟೆಯ ಜೆ ಎನ್ ಷಣ್ಮುಖಪ್ಪ ಗೌಡರು 1942 ರಲ್ಲಿ ಮಹಾತ್ಮ ಗಾಂಧೀಜಿಯ ಕರೆಗೆ ಓಗೊಟ್ಟು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೊಲನದಲ್ಲಿ ಭಾಗವಹಿಸಿದ್ದರು.ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಭತ್ಯೆಯನ್ನು ನಯವಾಗಿಯೇ ತಿರಸ್ಕರಿಸಿ ” ನಾನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇನೆ ನನಗೆ ಯಾವುದೇ ಭತ್ಯೆ ಬೇಡ ಎಂದಿದ್ದರು.

1958 ರ ಏಪ್ರಿಲ್ ತಿಂಗಳಿನಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಮೂರನೇ ಸಹಕಾರಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು.ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಚಹಾಕೂಟಕ್ಕೆ ರಿಪ್ಪನ್ ಪೇಟೆಯ ಜೆ ಎನ್ ಷಣ್ಮುಖಪ್ಪ ಗೌಡರು ಸೇರಿದಂತೆ ಅನೇಕ ಸಹಕಾರಿ ಧುರೀಣರನ್ನು ಆಹ್ವಾನಿಸಿದ್ದರು

ಮೂಲತಃ ಕೃಷಿಕರಾಗಿದ್ದ ಷಣ್ಮುಖಪ್ಪ ಗೌಡರು ನಂತರ ಊರಿನಲ್ಲಿ ರೈತರಿಗೆ ನೆರವಾಗುವಂತಹ ಅಕ್ಕಿ ಗಿರಣಿಯನ್ನು ಸ್ಥಾಪಿಸಿದ್ದರು. ರಿಪ್ಪನ್ ಪೇಟೆ ಸಹಕಾರ ಸಂಘದ ಸದಸ್ಯರಾಗಿ ನಂತರ ತಮ್ಮ ಸೇವಾ ಮನೋಭಾವದಿಂದ ಸಹಕಾರ ಸಂಘದ ಅಧ್ಯಕ್ಷರಾಗಿಯು ಕಾರ್ಯ ನಿರ್ವಹಿಸಿದ್ದರು.

ರಿಪ್ಪನ್ ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಕೊಡಿಸುವಲ್ಲಿ ಜೆ ಎನ್ ಷಣ್ಮುಖಪ್ಪ ಗೌಡರವರ ಪಾತ್ರ ತುಂಬಾ ಹಿರಿದಾಗಿದೆ.1963 ರಲ್ಲಿ ಖಾಸಗಿಯವರ ಮನೆಯಲ್ಲಿ ಪ್ರೌಢಶಾಲೆಯನ್ನು ಆರಂಬಿಸಿದ ಇವರು ನಂತರ ತಮ್ಮ ಸ್ವಂತ ಖರ್ಚಿನಲ್ಲಿಯೇ ಶಾಲೆಗಾಗಿ ಕೊಠಡಿಗಳನ್ನು ಕಟ್ಟಿಕೊಟ್ಟಿದ್ದರು.ನಂತರ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ರವರು ರಿಪ್ಪನ್ ಪೇಟೆಗೆ ಆಗಮಿಸಿದಾಗ ಪ್ರೌಢಶಾಲೆಯನ್ನು ಸರ್ಕಾರಕ್ಕೆ ವಹಿಸಿಕೊಟ್ಟಿದ್ದರು.

ಸಾಹಿತ್ಯದಲ್ಲೂ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಇವರು ರಾಮಾಯಣ,ಮಹಾಭಾರತ,ವಚನ ಸಾಹಿತ್ಯ, ಧಾರ್ಮಿಕ ಸಾಹಿತ್ಯ ಹಾಗೂ ರಾಷ್ಟ್ರನಾಯಕರ ಚರಿತ್ರೆಗಳನ್ನು ಸೇರಿದಂತೆ ಅನೇಕ ಪುಸ್ತಕಗಳನ್ನು ಸಂಗ್ರಹಿಸಿ ಮನೆಯಲ್ಲಿಯೇ ಸಣ್ಣ ಗ್ರಂಥಾಲಯವೊಂದನ್ನು ಇಟ್ಟುಕೊಡಿದ್ದರು.

ಪ್ರಾಮಾಣಿಕ,ಸರಳ,ಶಿಸ್ತುಬದ್ದ ಜೀವನ,ಊರಿನೆಡಗಿನ ಅದಮ್ಯ ಪ್ರೀತಿ ತೋರುತ್ತಿದ್ದ ಜೆ ಎನ್ ಷಣ್ಮುಖಪ್ಪ ಗೌಡರವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ.


ಸಂತಾಪ:

ರಿಪ್ಪನ್ ಪೇಟೆಯ  ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜೆ ಎನ್ ಷಣ್ಮುಖಪ್ಪ ಗೌಡರವರ ನಿಧನಕ್ಕೆ ಶಾಸಕರಾದ ಹರತಾಳು ಹಾಲಪ್ಪ ,ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮುಖಂಡರುಗಳಾದ ಅರ್ ಎ ಚಾಬುಸಾಬ್,ಎಂ ಬಿ ಮಂಜುನಾಥ್, ಆರ್ ಟಿ ಗೋಪಾಲ್,ಆರ್ ಎನ್ ಮಂಜುನಾಥ್, ಸುಧೀಂದ್ರ ಪೂಜಾರಿ,ಎನ್ ಸತೀಶ್,ಆಸೀಫ಼್ ಭಾಷಾ ಸಾಬ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


Leave a Reply

Your email address will not be published. Required fields are marked *