WhatsApp Channel Join Now
Telegram Channel Join Now
ರಿಪ್ಪನ್ ಪೇಟೆ : ಜೈನರ ದಕ್ಷಿಣದ ಕಾಶಿಯಾಗಿರುವ ಹೊಂಬುಜ ಕ್ಷೇತ್ರದಲ್ಲಿ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪದ್ಮಾವತಿ ದೇವಿಗೆ ನವರಾತ್ರಿಯ ಒಂಬತ್ತು ದಿನಗಳು ಬೇರೆ ಬೇರೆ ರೀತಿಯಲ್ಲಿ ಅಲಂಕರಿಸಿ ಪ್ರತಿ ದಿನ ವೈಭವದಿಂದ ಆಚರಿಸಲಾಯಿತು. ಕೆಟ್ಟದ್ದರಿಂದ ನಮ್ಮನ್ನು ರಕ್ಷಿಸುವ ಮಾತೆಯಾಗಿ ದೇವಿಯನ್ನು ಈ ದಿನಗಳಲ್ಲಿ ಕಾಣಲಾಗುತ್ತದೆ.ನವರಾತ್ರಿಯ ಕೊನೆಯ ದಿನವಾದ ಶುಕ್ರವಾರದಂದು ಹೊಂಬುಜ ಕ್ಷೇತ್ರದಿಂದ ಆನೆ ಮತ್ತು ಅಶ್ವ ದೊಂದಿಗೆ ಪಲ್ಲಕ್ಕಿಯ ರಾಜಬೀದಿ ಉತ್ಸವವು ಬನ್ನಿ ಮಂಟಪಕ್ಕೆ ತೆರಳಿ   ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬನ್ನಿ ಮುರಿದು ಭಕ್ತರಿಗೆ ಪ್ರಸಾದ ಹಂಚುವ ಮೂಲಕ ನವರಾತ್ರಿ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಹೊಂಬುಜ ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಯವರು ಮಾತನಾಡಿ ದೇಶಾದ್ಯಂತ ದಸರಾ ಹಬ್ಬವನ್ನು ವೈಭವದಿಂದ ಆಚರಿಸುತ್ತಿದ್ದಾರೆ.ವಿಶೇಷ ಪರಂಪರೆ ಇರುವ ಹಬ್ಬ ದಸರಾ ಹಬ್ಬವಾಗಿರುತ್ತದೆ.ರಾಮಾಯಣ,ಮಹಾಭಾರತ ಕಾಲದಿಂದಲೂ ಈ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದೆ.ಜೈನ ಧರ್ಮದ ಅನುಸಾರ ಹೊಂಬುಜ ಜೈನ ಮಠದಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಎಂದರು.

ಎಲ್ಲಾರು ಕೋವಿಡ್ ಲಸಿಕಾ ಅಭಿಯಾನಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ ಎಂದು ಈ ಸಂಧರ್ಭದಲ್ಲಿ ಹೇಳಿದರು.


ಹೊಂಬುಜ ಕ್ಷೇತ್ರದ ಇತಿಹಾಸ

ಜೈನ ಧರ್ಮದ ಉಚ್ಛ್ರಾಯ ಕಾಲದಲ್ಲಿ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಆದರೆ ಆ ಧರ್ಮ ರಾಜರ ಅವನತಿಯೊಂದಿಗೆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಬಹು ಪ್ರಾಚೀನ ಕಾಲದಿಂದ ಆಧುನಿಕ ಯುಗವಾದ ಇಂದಿನ ದಿನದಲ್ಲೂ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಶ್ರೀಪದ್ಮಾವತಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ ಜೈನ ಧರ್ಮೀಯರ ಕಾಶಿಯಾಗಿ ನಿತ್ಯ ಹಿಂದೂ ಹಾಗೂ ಜೈನ ಧರ್ಮೀಯ ಭಕ್ತರನ್ನು ಆಕರ್ಷಿಸುತ್ತಿದೆ.

ಇಲ್ಲಿನ ಅಧಿದೇವತೆ ಶ್ರೀಪದ್ಮಾವತಿ ಜೈನರ 23 ನೇ ತೀರ್ಥಂಕರ ಶ್ರೀಪಾರ್ಶ್ವನಾಥ ಸ್ವಾಮಿಯ ಯಕ್ಷಿಯಾಗಿದ್ದು ಜಿನದತ್ತ ರಾಜನಿಗೆ ಆಶ್ರಯನೀಡಿ ಸಾಮ್ರಾಜ್ಯ ಕರುಣಿಸಿದ ಕರುಣಾಮಯಿ. ಸಂತಾನಪ್ರಾಪ್ತಿ, ಉದ್ಯೋಗ ಲಭ್ಯತೆ, ವ್ಯಾಪಾರದಲ್ಲಿ ವೃದ್ಧಿ, ಭೂಮಿ ,ಧನ, ಕನಕ ಐಶ್ವರ್ಯಗಳ ಪ್ರಾಪ್ತಿ, ದುಷ್ಟ ಶಕ್ತಿ ನಿವಾರಣೆ, ಜಾನುವಾರುಗಳ ಸಂತಾನ ವೃದ್ಧಿ, ಸಮೃದ್ಧ ಹೈನು ಬಯಕೆ, ಶತ್ರು ಪೀಡೆ ಪರಿಹಾರ ,ಮಾನಸಿಕ ಶಾಂತಿ ಮತ್ತು ವಂಶೋದ್ಧಾರಕ್ಕಾಗಿ ಹಲವು ಜನರು ಹರಕೆ ಹೊತ್ತು ಈ ದೇವಿಗೆ ಪೂಜೆ ಸಲ್ಲಿಸುತ್ತಾರೆ. ತುಲಾಬಾರ, ನಂದಾದೀಪ, ಜಲ ಅಭಿಷೇಕ, ಪಂಚಾಮೃತ ಅಭಿಷೇಕ,ವರಹ ಪೂಜೆ, ಪಂಚಕಜ್ಜಾಯ ಸಮರ್ಪಣೆ ಇತ್ಯಾದಿ ಹರಕೆ ಕಾರ್ಯಗಳು ಪ್ರತಿನಿತ್ಯ ನಿರಂತರವಾಗಿ ಇಲ್ಲಿ ನಡೆಯುತ್ತಿದ್ದು ಸದಾ ಭಕ್ತರು ಮತ್ತು ಪ್ರವಾಸಿಗರಿಂದ ಕೂಡಿರುತ್ತದೆ.

 ತಾಯಿ ಪದ್ಮಾವತಿ ದೇವಿ ಈ ಕ್ಷೇತ್ರದಲ್ಲಿ ಬಹುಕಾಲ ನೆಲೆಸಿ ಜಿನದತ್ತರಾಜನಿಗೆ ಈ ನಗರವನ್ನು ರಾಜಧಾನಿಯನ್ನಾಗಿ ದಯಪಾಲಿಸಿದಳು. ಆತನಿಗೆ ಸಮರ್ಥ ಆಡಳಿತಕ್ಕೆ ಪ್ರೇರೇಪಿಸಿ ಸಿಂಹಲಾಂಛನವನ್ನು ಕರುಣಿಸಿದಳು. ಸಾಮ್ರಾಜ್ಯದ ಉಚ್ಚ್ರಾಯದಿಂದ ಪದ್ಮಾವತಿ ದೇವಿಯ ಕಾರಣಿಕವೂ ಪ್ರಸಿದ್ಧಗೊಂಡಿತು. ಇಲ್ಲಿನ ಬಸದಿಯ ಹಿಂಭಾಗದಲ್ಲಿ ಬೃಹತ್ ನೆಕ್ಕಿ(ಲಕ್ಕಿ) ಮರವಿದ್ದು ಇದು ಪದ್ಮಾವತಿ ದೇವಿಯ ಮೂಲ ನೆಲೆ ಎನ್ನಲಾಗಿದೆ. ಈಗಲೂ ಸಹ ಈ ಮರದ ಕಟ್ಟೆಯ ಕೆಳ ಗೋಡೆಯ ಶಿಲಾ ಫಲಕದಲ್ಲಿ ಶ್ರೀಪದ್ಮಾವತಿ ದೇವಿ, ಕೆಳಗಡೆ ಅಶ್ವಾರೋಹಿಯಾಗಿ ದಂಡ ಹಿಡಿದಿರುವ ವಿಕ್ರಮ ಸಾಂತರ ಶಿಲ್ಪವಿದೆ.

ಹುಂಚ ಕ್ಷೇತ್ರಕ್ಕೆ ಸುಮಾರು ೧೫೦೦ ವರ್ಷಗಳ ಐತಿಹಾಸಿಕ ದಾಖಲೆಯಿದೆ.ಇದನ್ನು ಹುಂಚ, ಹೊಂಬುಜ, ಪೊಂಬುರ್ಚ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು ಎಂದು ಶಾಸನಗಳಿಂದ ವೇದ್ಯವಾಗುತ್ತದೆ. ಸಾಂತರಸರು ಈ ಸ್ಥಳವನ್ನು ರಾಜಧಾನಿಯನ್ನಾಗಿಸಿಕೊಂಡು ಸಾಂತಳಿಗೆ ಸಾಸಿರ ಎಂಬ ನಾಡು ಕಟ್ಟಿ ೧೦೦೦ ವರ್ಷಕ್ಕೂ ಅಧಿಕ ಕಾಲ ಆಳಿದರು ಎಂದು ದಾಖಲೆಗಳಿಂದ ತಿಳಿದು ಬರುತ್ತದೆ. ಹಿಂದೆ ಶೈವ, ವೈಷ್ಣವ ಧರ್ಮಿಯರ ನಾಡಾಗಿದ್ದು ಕ್ರಮೇಣ ಜೈನರ ಆಡಳಿತಕ್ಕೊಳಪಟ್ಟು ಈ ಕ್ಷೇತ್ರ ಜಿನಾಲಯ, ಬಸದಿಗಳ ಸಾಲು, ವಾಸ್ತು ವೈಭವ ಮತ್ತು ಧಾರ್ಮಿಕ ಪರಂಪರೆ ಸಂಸ್ಕೃತಿಗಳಿಂದ ಜೈನರ ಕ್ಷೇತ್ರವಾಗಿ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಜೈನ ಮತ್ತು ಹಿಂದೂ ಧರ್ಮೀಯರ ಶ್ರದ್ಧಾ ಕೇಂದ್ರವಾಗಿದೆ.

ಈ ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ.ಅಂತರದಲ್ಲಿ ಬಿಲ್ಲೇಶ್ವರವೆಂಬ ಸ್ಥಳವಿದ್ದು ಇಲ್ಲಿ ಕುಮದ್ವತಿ ನದಿಯ ಉಗಮಸ್ಥಾನವಿದೆ. ಉತ್ಸವಗಳಂದು ಈ ಕುಮದ್ವತಿ ತೀರ್ಥವನ್ನು ತಂದು ದೇವರಿಗೆ ಅಭಿಷೇಕ ಮಾಡುವ ಸಂಪ್ರದಾಯವಿದೆ.


ವರದಿ : ರಫ಼ಿ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *