ಭದ್ರಾವತಿ ಸಮೀಪದ ಗೊಂದಿ ಅಣೆಕಟ್ಟೆಯಲ್ಲಿ ಈಜಲು ಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು ಕಂಡ ಹೃದಯ ವಿದ್ರಾವಕ ಘಟನೆ ಇಂದು ಮಧ್ನಾಹ್ನ ಗೊಂದಿ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಗಾಡಿಕೊಪ್ಪ ಹಾಗೂ ಕೊಮ್ಮನಾಳ್ ಗ್ರಾಮದ ಕಿರಣ್ ಹಾಗೂ ಶಶಾಂಕ್ (19 ವರ್ಷ) ಎಂಬುವರೇ ಸಾವು ಕಂಡ ನತದೃಷ್ಟ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಶಿವಮೊಗ್ಗದ ಎಡುಕೇರ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಈ ನತದೃಷ್ಟರು ಸ್ನೇಹಿತರೊಂದಿಗೆ ಗೊಂದಿ ಗ್ರಾಮದಲ್ಲಿರುವ ನೈಸರ್ಗಿಕ ಸೊಬಗನ್ನು ನೋಡಲು ಬಂದಿದ್ದಾರೆ, ಒಟ್ಟು ಐವರು ಕಾಲೇಜು ವಿದ್ಯಾರ್ಥಿಗಳಲ್ಲಿ ಕಿರಣ್ ಹಾಗೂ ಶಶಾಂಕ್ ಭದ್ರಾನದಿಯಲ್ಲಿ ಈಜಲು ನೀರಿಗೆ ಇಳಿದಿದ್ದಾರೆ, ದುರದೃಷ್ಟವೆಂದರೆ ಇಬ್ಬರಿಗೂ ಈಜಲು ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.
ಅಣೆಕಟ್ಟಿನ ಬುಡದಲ್ಲಿ ನೀರಿನ ಸೆಳೆತ ಹಾಗೂ ಆಳ ಇರುವುದನ್ನು ಗಮನಿಸದ ಈ ವಿದ್ಯಾರ್ಥಿಗಳು ಒಬ್ಬರ ಹಿಂದೆ ಒಬ್ಬರು ಸ್ನೇಹಿತರ ಕಣ್ಣೇದುರಿಗೆ ನೀರು ಪಾಲಾಗಿದ್ದಾರೆ. ಈ ಘಟನೆ ನಡೆದ ತಕ್ಷಣ ಅಲ್ಲಿನ ಗ್ರಾಮಸ್ಥರು ಉಳಿದವರ ನೆರವಿಗೆ ಧಾವಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದರು.
ಮಾನವೀಯತೆ ಮೆರೆದ ಗ್ರಾಮಸ್ಥರು;
ಈ ಘಟನೆಯ ಮಾಹಿತಿ ತಿಳಿದ ಗೊಂದಿ ಗ್ರಾಮಸ್ಥರು ತಂಡೋಪ ತಂಡವಾಗಿ ಅಣೆಕಟ್ಟಿನ ಆಸುಪಾಸಿನಲ್ಲಿ ಜಮಾವಣೆಗೊಂಡು, ಇಂತಹ ದುರ್ಘಟನೆ ಈ ಭಾಗದಲ್ಲಿ ಎಂದೂ ನಡೆದಿರಲಿಲ್ಲ ಎಂದು ಪಶ್ಚತ್ತಾಪ ಪಟ್ಟಿದ್ದಾರೆ, ಅಲ್ಲದೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ನೀರಿನಲ್ಲಿ ಇಳಿದು ಶವ ತೆಗೆಯಲು ಮೀನಾಮೇಷ ಎಣಿಸುತ್ತಿರುವಾಗ ಗ್ರಾಮಸ್ಥರೇ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಗಳ ಶವ ತೆಗೆದು ಮಾನವೀಯತೆ ಮೆರೆದಿದ್ದಾರೆ