ಹೊಸನಗರ: ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮೀಸಲಿಟ್ಟಿದ್ದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಘಟನೆ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೋಗಿ ಎಂಬಲ್ಲಿ ನಡೆದಿದೆ.
ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿದ್ದರಿಂದ ಬುಡಕಟ್ಟು ಜನಾಂಗದ ಮೃತಪಟ್ಟ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಕಾಯಿಸಿದ ಘಟನೆ ಮುಂಬಾರು ಗ್ರಾಮದ ಹಿರಿಯೋಗಿಯಲ್ಲಿ ನಡೆದಿದೆ.
ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೋಗಿ ಗ್ರಾಮದ ಸರ್ವೆ ನಂ16 ರಲ್ಲಿ 2 ಎಕರೆ ಪ್ರದೇಶವನ್ನು ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಹಸಲರು ಸಮುದಾಯಕ್ಕೆ ರುದ್ರಭೂಮಿಯನ್ನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಲಾಗಿದ್ದು,ಹಲವಾರು ವರ್ಷಗಳಿಂದ ಇದೇ ಸ್ಥಳವನ್ನು ಬುಡಕಟ್ಟು ಜನಾಂಗದವರು ರುದ್ರಭೂಮಿಯಾಗಿ ಉಪಯೋಗಿಸುತಿದ್ದಾರೆ.
ಬುಧವಾರ ಗ್ರಾಮದ ಇಂದಿರಮ್ಮ ಎಂಬ ಮಹಿಳೆ ಮೃತಪಟ್ಟಿದ್ದು, ಗ್ರಾಮಸ್ಥರು ಮುಂಜಾನೆ ಮೀಸಲಿದ್ದ ರುದ್ರಭೂಮಿ ಜಾಗದಲ್ಲಿ ಶವ ಸಂಸ್ಕಾರಕ್ಕೆ ಸಿದ್ದಪಡಿಸಿಕೊಳ್ಳುತ್ತಿರುವಾಗ ಗ್ರಾಮದ ಖಾಸಗಿ ವ್ಯಕ್ತಿಗಳು ಆ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲು ಅಡ್ಡಿಪಡಿಸಿದ್ದಾರೆ.ಈ ಸಂಧರ್ಭದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮೃತದೇಹವನ್ನು ಇಟ್ಟು ಪ್ರತಿಭಟನೆಗೆ ಮುಂದಾದ ಪ್ರಸಂಗ ನಡೆಯಿತು.
ಈ ಸಂಧರ್ಭದಲ್ಲಿ ಸ್ಥಳಕ್ಕಾಗಮಿಸಿದ ರಿಪ್ಪನ್ ಪೇಟೆ ಸಬ್ ಇನ್ಸ್ ಪೆಕ್ಟರ್ ಶಿವಾನಂದ ಕೋಳಿ ಹಾಗೂ ಸಿಬ್ಬಂಧಿಗಳು ಪರಿಸ್ಥಿತಿಯನ್ನು ನಿಭಾಯಿಸಿ ಮೃತದೇಹದ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟರು.
ನಂತರ ಮಾದ್ಯಮದರೊಂದಿಗೆ ಮಾತನಾಡಿದ ಗ್ರಾಮಸ್ಥರಾದ ಕೆ ಸಿ ರಾಜಪ್ಪ ನಾವು ಈ ಹಿಂದೆ ಸರ್ವೆ ನಂ 16 ರಲ್ಲಿ ಎರಡು ಎಕರೆ ಜಾಗವನ್ನು ಬುಡಕಟ್ಟು ಜನಾಂಗದ ರುದ್ರಭೂಮಿಗೆ ಮೀಸಲಿಡಲು ಅರ್ಜಿಯನ್ನು ಸಲ್ಲಿಸಿದ್ದು,ಈ ಜಾಗದ ಜಿ ಪಿ ಎಸ್ ಕೂಡ ಆಗಿದ್ದು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಮಂಜೂರಾತಿ ತಡವಾಗಿದೆ.
ಈ ಬಗ್ಗೆ ಖಾಸಗಿ ವ್ಯಕ್ತಿಗಳು ಕೋರ್ಟ್ ಗೆ ಸಲ್ಲಿಸಿದ್ದ ತಕರಾರು ಅರ್ಜಿ ಕೂಡ 2019 ರಲ್ಲಿ ವಜಾ ಆಗಿದೆ ಆದರೂ ಇಂದು ಅಂತ್ಯಕ್ರಿಯೆಗೆ ಅಡ್ಡಿಪಡಿಸಿರುವುದು ಅವರ ದಬ್ಬಾಳಿಕೆತನವನ್ನು ತೋರಿಸುತ್ತದೆ. ಇನ್ನು ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಈ ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ಯೋಗೆಂದ್ರ,ಕೊಟ್ರೇಶ್ ಹಾಗೂ ಇನ್ನಿತರರಿದ್ದರು.