ಬೆಂಗಳೂರು: ಇದೇ ತಿಂಗಳ 19 ಹಾಗೂ 22 ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದೇ ಜುಲೈ 19 ಹಾಗೂ 22 ರಂದು ಪರೀಕ್ಷೆ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಅನುಮತಿ ನೀಡಿದ್ದು ಈ ಬಗ್ಗೆ ಎರಡು ನಿಗಮಗಳು ಆದೇಶ ಹೊರಡಿಸಿವೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ವಾಪಸ್ ಬರಲು ಅನುಮತಿ ನೀಡಲಾಗಿದೆ. ರಸ್ತೆ ಮಧ್ಯದಲ್ಲಿ ಪರೀಕ್ಷಾ ಕೇಂದ್ರಗಳು ಇದ್ದಲ್ಲಿ ಅಲ್ಲಿ ಕೋರಿಕೆ ನಿಲುಗಡೆಗೂ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಪರೀಕ್ಷೆ ಪ್ರವೇಶ ಪತ್ರ ವನ್ನು ತೋರಿಸಬೇಕಿದೆ.
KSRTC ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ನಗರ ಸಾರಿಗೆ ಬಿಎಂಟಿಸಿ ಬೆಂಗಳೂರು ನಗರದ ಒಳಗೆ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿದ್ದು, ಹಾಲ್ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ.
ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಉಚಿತ ಪ್ರಯಾಣವನ್ನು ಅನುಮತಿಸಲು ನಿಗಮದ ಎಲ್ಲಾ ಚಾಲಕ/ನಿರ್ವಾಹಕರುಗಳಗೆ ನಿಗಮ ಸೂಚಿಸಿದೆ.
ವರದಿ: ರಾಮನಾಥ್