Heddaripura | ಕಿಡಿಗೇಡಿ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಪುಂಡಾಟ – ಪೀಠೋಪಕರಣಗಳು ಪೀಸ್ ಪೀಸ್ : ಬೆಚ್ಚಿಬಿದ್ದ ಶಿಕ್ಷಕರು ಹಾಗೂ ಪೋಷಕರು
ರಿಪ್ಪನ್ ಪೇಟೆ : ಮಲೆನಾಡಿನ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪೋಷಕರ,ಶಿಕ್ಷಕರ ಹಾಗೂ ತಮ್ಮ ಪ್ರತಿಭೆಯ ಸಹಕಾರದಿಂದ ಉನ್ನತ ಶಿಕ್ಷಣವನ್ನು ಪಡೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಅಂತ ಮಲೆನಾಡಿನಲ್ಲಿ ಕೆಲ ಕಿಡಿಗೇಡಿಗಳ ವಿದ್ಯಾರ್ಥಿಗಳ ಪುಂಡಾಟಿಕೆಯ ಅಟ್ಟಹಾಸದಿಂದ ಪೋಷಕರು ಶಿಕ್ಷಕರು ಬೆಚ್ಚಿ ಬಿದ್ದಿದ್ದಾರೆ ಹಾಗೂ ಗ್ರಾಮಸ್ಥರು ಮರ್ಯಾದೆಗೆ ಅಂಜಿ ತಲೆ ಬಾಗಿಸುವಂಥಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಪ್ರೌಢ ಶಾಲೆಯಲ್ಲಿ ನಡೆದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುನ್ನ ಕೆಲ ಕಿಡಿಗೇಡಿ ವಿದ್ಯಾರ್ಥಿಗಳ ದಾಂದಲೆಯಿಂದ ತರಗತಿಯಲ್ಲಿನ ಕುರ್ಚಿ, ಟ್ಯೂಬ್ ಲೈಟ್, ಫ್ಯಾನ್ , ಹಂಚು, ಕಿಟಕಿ ಬಾಗಿಲು, ಕ್ಷಣಮಾತ್ರದಲ್ಲಿ ಪೀಸ್ ಪೀಸ್ ಆಗಿದೆ.
ಪುಂಡ ವಿದ್ಯಾರ್ಥಿಗಳ ಅಟ್ಟಹಾಸದಿಂದ ಶಾಲೆಯ ಮರ್ಯಾದೆ ಹೋಗುತ್ತದೆ ಹಾಗೂ ಸೋಮವಾರದಿಂದ ಪ್ರಾರಂಭವಾಗುವ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಶಾಲಾ ಅಭಿವೃದ್ಧಿ ಸಮಿತಿಯವರು, ಶಿಕ್ಷಕರುಗಳು ಗ್ರಾಮಸ್ಥರು ಶನಿವಾರ ಶಾಲೆಯಲ್ಲಿ ಸಭೆ ಕರೆದು ಪೀಠೋಪಕರಣಗಳನ್ನು ಹಾಳು ಮಾಡಿದ ಪುಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರುಗಳಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ.
ತಾವುಗಳು ಮಾಡಿದ ದಾಂದಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಪುಂಡ ವಿದ್ಯಾರ್ಥಿಗಳು ಅಪ್ಲೋಡ್ ಮಾಡಿದ್ದಾರೆ. ಅದೀಗ ವೈರಲ್ ಆಗಿ ಲೈಕ್ ಜೊತೆಗೆ ಶಾಲೆಯ ಮಾನವು ಹರಾಜು ಆಗುತ್ತಿದೆ.