ಹೆದ್ದಾರಿಪುರದಲ್ಲಿ ಯುವತಿಯ ಕೊಲೆ | ಆನಂದಪುರ ಸಮೀಪದಲ್ಲಿ ಮೃತದೇಹ ಹೂತಿಟ್ಟ ಪ್ರಿಯಕರ – ಆರೋಪಿಯ ಬಂಧನ
ರಿಪ್ಪನ್‌ಪೇಟೆ : ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳ ನಡುವಿನ ಕಲಹ ತಾರಕಕ್ಕೇರಿ ಪತ್ನಿಯನ್ನು ಹತ್ಯೆಗೈದು ಮೃತದೇಹವನ್ನು ಹೂತಿಟ್ಟಿರುವ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಡೆದಿದ್ದೇನು..!?
ಕೊಪ್ಪ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಯುವತಿ ಮಿಸ್ಸಿಂಗ್ ಪ್ರಕರಣವೊಂದು ದಾಖಲಾಗಿತ್ತು, ಪ್ರಕರಣದ ಬೆನ್ನತ್ತಿದ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಸಾಗರ ಮೂಲದ ಯುವಕ ಮತ್ತು ಯುವತಿ ಇತ್ತೀಚೆಗೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಕೊಪ್ಪದಲ್ಲಿ ವಾಸ ಮಾಡುತ್ತಿತ್ತು. ಈ ನಡುವೆ ಇಬ್ಬರ ನಡುವೆ ಪರಸ್ಪರ ಜಗಳವಾಗಿದೆ. ಯುವತಿ ತನ್ನನ್ನು ಸಾಗರದಲ್ಲಿರುವ ಆತನ ನಿವಾಸಕ್ಕೆ ಕರೆದೊಯ್ಯುವಂತೆ ಪತಿಯನ್ನು ಒತ್ತಾಯಿಸಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
ಈ ಜಗಳದ ಬೆನ್ನಲ್ಲೆ ಯುವಕ ಯುವತಿಯನ್ನ ಆಕೆಯ ತಾಯಿಯ ಮನೆಗೆ ಹೋಗುವಂತೆ ಸೂಚಿಸಿದ್ದಾನೆ. ಮನೆಯಲ್ಲಿ ಎಲ್ಲರನ್ನ ಒಪ್ಪಿಸಿ ಮನೆ ತುಂಬಿಸಿಕೊಳ್ಳುವುದಾಗಿ ಹೇಳಿದ್ದನಂತೆ. ಆದರೆ ಹುಡುಗಿ ಆತನ ಮಾತು ನಂಬಿ ತನ್ನ ತಾಯಿ ಮನೆಗೆ ಹೋಗದೇ, ಇದೇ ವಿಚಾರವಾಗಿ ಸಾಗರಕ್ಕೆ ಬಂದು ಯುವತಿ ಗಲಾಟೆ ಮಾಡಿದ್ದಾಳೆ.
ಹೆದ್ದಾರಿಪುರದಲ್ಲಿಯೇ ನಡೆಯಿತು ಕೊಲೆ !..
ಇಬ್ಬರ ನಡುವಿನ ಕಲಹ ತಾರಕಕ್ಕೇರಿ ಯುವತಿ ಸಾಗರದಿಂದ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರಕ್ಕೆ ಬಂದು ನಿಂತು ಯುವಕನ ಜೊತೆಗೆ ಮಾತನಾಡಿದ್ದಾಳೆ. ಅಲ್ಲಿಯು ಇಬ್ಬರ ನಡುವೆ ಗಲಾಟೆಯಾಗಿದೆ, ಈ ವೇಳೆ ಯುವಕ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ, ಹಲ್ಲೆಯಿಂದ ಯುವತಿ ಸಾವನ್ನಪ್ಪಿದ್ದಾಳೆ, ನಂತರ ಮೃತದೇಹವನ್ನು ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಹೂತು ಹಾಕಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸರು ಶಿವಮೊಗ್ಗದ ಆನಂದಪುರ , ರಿಪ್ಪನ್‌ಪೇಟೆ ಪೊಲೀಸ್ ಸ್ಟೇಷನ್ ನ್ನು ಸಂಪರ್ಕಿಸಿದ್ದು ಹೆದ್ದಾರಿಪುರದಲ್ಲಿ ಮಹಜರ್ ನಡೆಸಿದ್ದಾರೆ.
ಇಂದು ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಯುವತಿಯ ಶವವನ್ನು ಮೇಲೆತ್ತಿ ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ. ಈ ಸಂಬಂಧ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.