ಶಿವಮೊಗ್ಗದ ಹೊಸಮನೆಯಲ್ಲಿ ಝಳಪಿಸಿದ ಲಾಂಗು, ಮಚ್ಚು – ಕಾರು , ಆಟೋ ,ಬೈಕ್ ಧ್ವಂಸ : ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್ ಭೇಟಿ
ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಮುನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ ಹಾಗೂ ಬೈಕ್ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಗಾಂಜಾ ನಶೆಯಲ್ಲಿ ವಾಹನಗಳನ್ನು ಜಖಂ ಮಾಡಿದ್ದಾರೆ ಎನ್ನಲಾಗಿದೆ.
ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನು ರಾತ್ರೋ ರಾತ್ರಿ ಹಾನಿ ಮಾಡಿದ್ದಾರೆ. ಕಾರಗಳ ಗಾಜು ಚೂರು ಚೂರು ಮಾಡಿದ್ದು, ಜಗದೀಶ್ ಎಂಬವರಿಗೆ ಸೇರಿದ ಅಂಗಡಿಯ ಬೀಗವನ್ನು ಮಚ್ಚಿನಿಂದ ಹೊಡೆದು ಹಾನಿ ಮಾಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶಾಸಕ ಎಸ್ಎನ್ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಗಾಂಜಾ ಪ್ಯಾಕೇಟ್ ಹಾಗೂ ಮದ್ಯದ ಬಾಟಲ್ಗಳು ಪತ್ತೆಯಾಗಿವೆ. ಬಡಾವಣೆಯ ಪರಿಸ್ಥಿತಿ ಕಂಡು ಶಾಸಕ ಚನ್ನಬಸಪ್ಪ ಅಚ್ಚರಿಗೊಳಗಾದರು. ಇದೇ ವೇಳೆ ಸ್ಥಳೀಯರು ಕಿಡಿಗೇಡಿಗಳ ಹಾವಳಿಯನ್ನು ವಿವರಿಸಿದರು. ಕಿಡಿಗೇಡಿಗಳ ನಿರಂತರ ಹಾವಳಿಯಿಂದ ಬೇಸತ್ತಿರುವುದಾಗಿ ತಿಳಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಚನ್ನಬಸಪ್ಪ ನಿನ್ನೆ ಬುಧವಾರ ರಾತ್ರಿ ದೊಡ್ಡ ಗುಂಪುವೊಂದು ಸಿಕ್ಕ ಸಿಕ್ಕ ವಾಹನಗಳನ್ನು ಜಖಂ ಮಾಡಿದೆ. ಮಚ್ಚು ಲಾಂಗ್ನಿಂದ ಹೊಡೆದು ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ.
ಬರ್ತ್ ಡೇ ಆಚರಿಸಿ ಗಾಂಜಾ ಸೇವನೆ ಮಾಡಿ ಈ ರೀತಿ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಈ ರೀತಿ ನಡೆಯುತ್ತಿದೆ ಆದರೆ ರಕ್ಷಣಾ ಇಲಾಖೆ ಗಮನ ಕೊಟ್ಟಿಲ್ಲ. ಆನಂದಪುರದಲ್ಲಿ ತಲ್ವಾರು ಇಟ್ಟುಕೊಂಡು ಓಡಾಡುತ್ತಾರೆ. ಗೃಹ ಸಚಿವರು ಲಾ ಆಯಂಡ್ ಆರ್ಡರ್ ನಿಯಂತ್ರಣದಲ್ಲಿದೆ ಅಂತಾರೆ ಆದರೆ ಗಾಂಜಾ ಸೇವನೆಯಿಂದ ಈ ರೀತಿ ಆಗುತ್ತಿದೆ ಅಂದರೆ ಹೊಣೆ ಯಾರು? ಗೃಹ ಇಲಾಖೆ ಜವಾಬ್ದಾರಿ ಹೊಣೆ ಹೊರಬೇಕು. ಈ ರೀತಿ ಗೂಂಡಾ ವರ್ತನೆಗೆ ಕಡಿವಾಣ ಹಾಕದಿದ್ದರೆ ನಾಗರೀಕರೇ ಗೂಂಡಾ ವರ್ತನೆ ತೋರುವವರಿಂದ ಆತ್ಮ ರಕ್ಷಣೆಗೆ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಶಿವಮೊಗ್ಗ ಜಿಲ್ಲೆಯ ರಕ್ಷಣಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ ಪಿ ಮಿಥುನ್ ಕುಮಾರ್
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಎರಡು ಗಂಟೆಗೆ ನಡೆದ ದುಷ್ಕರ್ಮಿಗಳ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಎಸ್ಪಿ ಮಿಥುನ್ ಕುಮಾರ್ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಈ ವೇಳೆ ನಡೆದ ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಅವರು ಈ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ನೋಡುವುದಿಲ್ಲ ಎಂದಿದ್ದಾರೆ.
ಪುಂಡ ಪೋಕರಿಗಳಿಗೆ ತಕ್ಕ ಶಾಸ್ತಿ ಮಾಡುವುದಾಗಿ ಸ್ಥಳೀಯರಿಗೆ ಹೇಳಿದ ಅವರು, ನಡೆದ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಯಾವುದೇ ವಿಚಾರಕ್ಕೆ ಭಯ ಪಡುವುದು ಬೇಡ ಎಂದು ಅಲ್ಲಿದ್ದವರಿಗೆ ದೈರ್ಯ ತುಂಬಿದರು.
ಇನ್ನೂ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತದೆ ಎಂದು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಸ್ಥಳದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು.
ಇನ್ನೂ ಇದೇವೇಳೆ ಶಿವಮೊಗ್ಗ ನಗರದಾದ್ಯಂತ ಈಗಾಗಲೇ ರಾತ್ರಿ ಗಸ್ತು, ಫುಟ್ ಪೆಟ್ರೋಲಿಂಗ್, ಏರಿಯಾ ಡಾಮಿನೇಷನ್ ಗಳನ್ನು ನಡೆಸಲಾಗುತ್ತಿದ್ದು, ಹೊಸಮನೆ ಏರಿಯಾಕ್ಕೆ ವಿಶೇಷ ಒತ್ತು ನೀಡಿ ಪೊಲೀಸ್ ಗಸ್ತುನ್ನು ಹೆಚ್ಚಿಸಲಾಗುವುದು ಹಾಗೂ ಯಾರೇ ಆಗಲಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಕಂಡುಬಂದಲ್ಲಿ, ಅಂತಹವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ.