ಹುಂಚ : ಇಲ್ಲಿನ ನಾಗರಹಳ್ಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರವೊಂದು ಬಿದ್ದು ವ್ಯಕ್ತಿಯೋರ್ವನಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಹಾಲಂದೂರು ವಾಸಿ ಗುರುರಾಜ ನಿನ್ನೆ ರಾತ್ರಿ ಹುಂಚ-ನಾಗರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ನೆಟ್ಟಿರುವ ಅಕೇಶಿಯ ಮರ ಏಕಾಏಕಿ ಬಿದ್ದು ಎಡಗೈ ತುಂಡಾಗಿ ಗಂಭೀರ ಗಾಯಗೊಂಡಿದ್ದಾನೆ.ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಹತ್ತಿರದಲ್ಲಿಯೇ ಇರುವ ಆಟೋ ಚಾಲಕ ಅನಂತಭಟ್ ರವರ ಮನೆಯವರೆಗೆ ಗಾಯಾಳು ತೆವಳುತ್ತಾ ಬಂದು ಸಹಾಯಕ್ಕೆ ಕೂಗಿದ್ದಾರೆ.ಕೂಡಲೇ ಆಟೋ ಚಾಲಕ ಅನಂತ್ ಭಟ್ ರವರು ಗಾಯಾಳು ಗುರುರಾಜ್ ರನ್ನು ಹುಂಚ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಮಾನವೀಯತೆ ಮೆರೆದ ಆಟೋ ಚಾಲಕ ಅನಂತ್ ಭಟ್ ರವರನ್ನು ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ಸಂಪರ್ಕಿಸಿದಾಗ ಘಟನೆ ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ನಡೆದಿದ್ದು ಗಾಯಾಳು ಗುರುರಾಜ್ ನೋವಿನಲ್ಲಿ ತೆವಳುತ್ತಾ 11.30 ರ ಸಮಯಕ್ಕೆ ನಮ್ಮ ಮನೆ ಬಳಿ ಬಂದಿದ್ದರು ಕೂಡಲೇ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ನೇಹಿತರಾದ ವೆಂಕಟೇಶ್ ಹಾಗೂ ಮಧು ರವರ ಸಹಾಯದಿಂದ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿ ಆಸ್ಪತೆಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಟ್ಟೆವು ಎಂದು ಹೇಳಿದರು.
ಇನ್ನಾದರೂ ಸಂಬಂಧಪಟ್ಟವರು ರಸ್ತೆ ಬದಿಯಲ್ಲಿ ಮೃತ್ಯು ಕೂಪವಾಗಿ ಕಾಡುತ್ತಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸಬೇಕಾಗಿ ಗ್ರಾಮಸ್ಥರ ಆಗ್ರಹಿಸಿದ್ದಾರೆ.