ಶಿವರಾತ್ರಿಯ ನಿಮಿತ್ತ ಜಾಲಿ ಮೂಡ್ ನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ಆಘಾತವಾಗಿದೆ ಶಿವಮೊಗ್ಗ ಜಿಲ್ಲೆಯ ಭದ್ರಾ ಚೆಕ್ ಡ್ಯಾಂ ನ ನೀರಿನಲ್ಲಿ ಈಜಲು ಹೋಗಿದ್ದ ಸಿಮ್ಸ್ ನ ವಿದ್ಯಾರ್ಥಿ ನೀರುಪಾಲಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ.
ಭದ್ರಾ ನದಿಯ ಗೋಂದಿ ಚೆಕ್ ಡ್ಯಾಂಗೆ ಶಿವಮೊಗ್ಗದ ಸಿಮ್ಸ್ ನ ವಿದ್ಯಾರ್ಥಿ ಜಗತ್ ಮತ್ತು ಇತರೆ ಐವರು ಸ್ನೇಹಿತರು ಈಜಲು ತೆರಳಿದ್ದಾರೆ. ಜಗತ್(21) ಜೊತೆಗೆ ಓರ್ವ ನೀರಿಗೆ ಇಳಿದಿದ್ದಾನೆ. ಜಗತ್ ನೀರಿನಲ್ಲಿ ಮುಂದೆ ಹೋಗಿದ್ದು ಆಳವಿದ್ದುದ್ದರಿಂದ ನೀರಿನಲ್ಲಿ ಮುಳುಗಿದವನು ಮೇಲೆ ಏಳಲಿಲ್ಲಿ.
ಚೆಕ್ ಡ್ಯಾಂನ ಗೇಟಿಗೆ ಹೋಗಿ ಸಿಲುಕಿಕೊಂಡು ಹೆಣವಾಗಿ ದೊರೆತಿದ್ದಾನೆ. ಜಗತ್ ಕೊಡಗು ಜಿಲ್ಲೆಯವನಾಗಿದ್ದು ಶಿವಮೊಗ್ಗದ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದನು.
ಈ ಗೋಂದಿ ಜಾಗದಲ್ಲಿ ಯಾವಾಗಲೂ ಯುವಕರು ಈಜಲು ಬಂದು ಜೀವ ಕಳೆದುಕೊಂಡಿರುವ ಉದಾಹರಣೆಗಳಿವೆ. ಕಳೆದ ವರ್ಷವೂ ಇಲ್ಲಿ ಎರಡರಿಂದ ಮೂರು ಪ್ರಕರಣಗಳು ಈಜಲು ಹೋಗಿ ಸಾವುಕಂಡ ಘಟನೆಗಳು ದಾಖಲಾಗಿವೆ. ಇದು 2023 ನೇ ವರ್ಷದ ಮೊದಲನೇ ಪ್ರಕರಣವಾಗಿದೆ.
ಜಗತ್ ಮೃತ ದೇಹವನ್ನ ಶಿವಮೊಗ್ಗ ಮೆಗ್ಗಾನ್ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿರಿಸಲಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.