ಬಗರ್ ಹುಕುಂ ಜಮೀನಿನ ಅರ್ಧ ಎಕರೆಯಲ್ಲಿ ಕಾಡನ್ನು ಬೆಳೆಸುವ ನಿಯಮ ಜಾರಿಯಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ | GKB

ಬಗರ್ ಹುಕುಂ ಜಮೀನಿನ ಅರ್ಧ ಎಕರೆಯಲ್ಲಿ ಕಾಡನ್ನು ಬೆಳೆಸುವ ನಿಯಮ ಜಾರಿಯಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ | GKB

ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವಂತ ರೈತರಿಗೆ ಸರ್ಕಾರದಿಂದ ಸಾಗುವಳಿ ಪತ್ರವನ್ನು ನೀಡೋ ಕೆಲಸ ಮಾಡುತ್ತಿದೆ. ಇದರ ಜೊತೆ ಜೊತೆಗೆ ಇದೇ ಭೂಮಿಯ ಅರ್ಧ ಎಕರೆಯಲ್ಲಿ ಕಾಡು ಬೆಳೆಸೋದಕ್ಕೆ ಮೀಸಲಿಡುವಂತ ನಿಯಮವನ್ನು ಜಾರಿಗೊಳಿಸಬೇಕು ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾಳೆಹಳ್ಳಿಯಲ್ಲಿ ಸಾಗರ ಅರಣ್ಯಾಧಿಕಾರಿಗಳ ಸಹಕಾರದಿಂದ ವನ ಮಹೋತ್ಸವದಲ್ಲಿ ಗಿಡ ನೆಟ್ಟ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ನನಗೆ ಬಹಳ ಖುಷಿ ಆಯ್ತು ಇವತ್ತಿನ ಕಾರ್ಯಕ್ರಮ. ಮಲೆನಾಡು ಅಂದರೆ ನಮಗೆ ಜೀವ ರಕ್ಷಣೆ ಇರೋದೆ ಕಾಡಿನಲ್ಲಿ. ಕಳೆದ ವರ್ಷ ಮಳೆಯ ಅಭಾವ ಎಷ್ಟು ಆಗಿತ್ತು ಅಂತ ಗೊತ್ತಿದೆ ಎಂದರು.

ಕಾಡು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು. ನಾವು ಜಾಗೃತರಾಗಬೇಕು. ಆ ಕೆಲಸ ಮಾಡಲಿಲ್ಲ ಅಂದರೆ ತಾಪಮಾನದಲ್ಲಿ ವ್ಯತ್ಯಾಸ ಆಗಲಿದೆ ಎಂದರು.

ಒಂದು ಗಿಡ ಕಡಿದರೆ ಮತ್ತೊಂದು ಗಿಡ ನೆಡಬೇಕು. ಆ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಅದಕ್ಕೆ ಕಾಡು ನಾಶವಾಗುತ್ತಿರುವುದೇ ಕಾರಣ ಎಂದು ಹೇಳಿದರು.


ಬಗರ್ ಹುಕುಂ ಯೋಜನೆಯಡಿ ನಾಲ್ಕು ಎಕರೆ ಭೂಮಿ ಮಂಜೂರು ಮಾಡಲಾಗುತ್ತದೆ. ನಾನು ಸರ್ಕಾರಕ್ಕೆ ಮನವರಿಕೆ ಮಾಡಿದ್ದೇನೆ ಹೀಗೆ ನೀಡುವ ಜಮೀನಿನಲ್ಲಿ ಅರ್ಧ ಎಕರೆ ಕಾಡು ಬೆಳೆಸುವಂತೆ ಆದೇಶ ಮಾಡಬೇಕು. ಹೀಗೆ ಮಾಡಿದಾಗ ಎಷ್ಟು ಕಾಡು ಬೆಳೆಯಲಿದೆ ಎಂದು ಅಭಿಪ್ರಾಯ ಪಟ್ಟರು.

ಮನೆಯ ಮುಂದೆ ಗಿಡ ನೆಡುವ ಕೆಲಸ ಆಗಬೇಕು. ಗ್ರಾಮಸ್ಥರು ಈ ಕೆಲಸ ಮಾಡಬೇಕು. ನಿಮ್ಮ ಮನೆ ಮುಂದೆ ಎರಡು ಎರಡು ಗಿಡ ನೆಡುವ ಕೆಲಸ ಮಾಡಿ ಅಂತ ಕರೆ ನೀಡಿದರು.

ಇದೇ ವೇಳೆ ಮಾತನಾಡಿದಂತ ಸಾಗರ ಉಪ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಅವರು, ಅರಣ್ಯ ಭೂಮಿಗಿಂತ ಹೆಚ್ಚು ಪ್ರಶಸ್ತವಾಗಿದ್ದದ್ದು ಕಾನು ಸೊಪ್ಪಿನ ಬೆಟ್ಟ. ಸಮಾಜ ಮತ್ತು ಅರಣ್ಯ ಇಲಾಖೆ ಜೊತೆಗೂಡಿ ಕಾನುಸೊಪ್ಪಿನ ಬೆಟ್ಟವನ್ನು ಕಾಪಾಡುವ ಕೆಲಸ ಮಾಡಬೇಕು. ಈ ಬೆಟ್ಟಗಳಿಂದ ಹೊಲಕ್ಕೆ ಫಲವತ್ತತೆ ತರುವ ಕೆಲಸ ಮಾಡಬೇಕು. ಈ ಕಾರ್ಯ ಮುಂದುವರೆಯಲಿ. ನನ್ನ ಕಾನು, ನನ್ನ ಸೊಪ್ಪಿನ ಬೆಟ್ಟ ಅನ್ನುವ ಮನೋಭಾವ ಬರಲಿ ಅಂತ ಹೇಳಿದರು.

ಈ ಸಂದರ್ಭದಲ್ಲಿ ಆರ್ ಎಫ್ ಓ ಅರವಿಂದ್.ವಿ, ನಾಗವೇಣಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ವಾಸಿಂ ರಾಮಚಂದ್ರ ಭಟ್ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *