ಹೊಸನಗರ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಕಾರ್ಯಗಾರ
ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ
ರಿಪ್ಪನ್ ಪೇಟೆ : ಸಮಾಜದ ಸೇವೆಯಲ್ಲಿ ಅತ್ಯುನ್ನುತವಾದ ಸೇವೆಯನ್ನು ನೀಡುತ್ತಿರುವವರು ಶಿಕ್ಷಕರುಗಳು. ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್ ಎಲ್. ಭೋಜೇಗೌಡ ಹೇಳಿದರು.
ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರುಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಪ್ರಮುಖ ರಾಗಿರುತ್ತಾರೆ, ದೇಶದ ಅಭಿವೃದ್ಧಿ ಮತ್ತು ಉತ್ತಮ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರುಗಳ ಪಾತ್ರ ಮಹತ್ತರವಾದದ್ದು. ಆದುದರಿಂದ ಸಮಾಜವು ಶಿಕ್ಷಕರನ್ನು ಗೌರವಿಸುತ್ತದೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತಿಭೆ ಇರುತ್ತದೆ. ಆದರೆ ಅವಕಾಶಗಳು ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವ ಗುರುತರ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದರು.
ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿ ನಮ್ಮ ಮಕ್ಕಳ ರೀತಿಯಲ್ಲಿ ಪ್ರೀತಿ ಯೊಂದಿಗೆ ಪಾಠ ಪ್ರವಚನಗಳನ್ನು ಭೋದಿಸಿದಾಗ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ಹೊಂದಿ, ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಬರುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಕೊಡುಗೆಗಳಾಗುತ್ತಾರೆ ಎಂದರು.
ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಕೃಷ್ಣಪ್ಪ ಮಾತನಾಡಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮವಾದ ಫಲಿತಾಂಶವನ್ನು ನೀಡಿದ್ದಾರೆ. ಇದಕ್ಕೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸ ವರ್ಗದವರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಲಪ್ಪ ಸಂಕೂರ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರುಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಎಸ್ ಎಲ್ ಭೋಜೇಗೌಡ ರವರು ಜೂನ್ 30 ರಂದು ವಯೋನಿವೃತ್ತಿ ಹೊಂದುತ್ತಿರುವ ರಿಪ್ಪನ್ ಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಎ.ಮಂಜುನಾಥ್ ಹಾಗೂ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಬಿ. ಕೃಷ್ಣಪ್ಪ, ಹಾಗೂ ಶೇಕಡ 100ರಷ್ಟು ಫಲಿತಾಂಶಗಳನ್ನು ನೀಡಿದ ಉಪನ್ಯಾಸಕರುಗಳಿಗೆ ಸನ್ಮಾನಿಸಿ ಗೌರವಿಸಿದರು.
ಇದೇ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಪಿಯುಸಿ ಕಾಲೇಜಿಗೆ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ನೀಡಿದ ಶುದ್ಧ ನೀರಿನ ಘಟಕವನ್ನು ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯಗಳ ಸಂಘದ ಅಧ್ಯಕ್ಷ ಚಂದ್ರಪ್ಪ ಗುಂಡಪಲ್ಲಿ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಯೋಗೀಶ್, ಹೊಸನಗರ ಕಾಲೇಜಿನ ಪ್ರಾಚಾರ್ಯ ಸ್ವಾಮಿ ರಾವ್, ನಿಟ್ಟೂರಿನ ಕಾಲೇಜಿನ ಪ್ರಾಚಾರ್ಯ ಕೆ. ಎಸ್.ಗಣೇಶ್. ಹೋಲಿ ರೆಡಿ ಮೇಡ್ ಕಾಲೇಜಿನ ಪ್ರಾಚಾರ್ಯ ಸಿಸ್ಟರ್ ಐರಿನ್, ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ನಜಹತ್ ಉಲ್ಲಾ, ರಿಪ್ಪನ್ ಪೇಟೆ ಕಾಲೇಜಿನ ಪ್ರಾಚಾರ್ಯ ಎ.ಮಂಜುನಾಥ್ ಇದ್ದರು.
ಪ್ರಣತಿ ಅಣ್ಣಪ್ಪ ಪ್ರಾರ್ಥಿಸಿ. ಉಪನ್ಯಾಸಕರಾದ ಸುಬ್ರಹ್ಮಣ್ಯ ನಿರೂಪಿಸಿ, ಬೆಂಜಮಿನ್ ಫ್ರಾನ್ಸಿಸ್ ವಂದಿಸಿದರು.