ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!??
ಒಂದು ರಾಷ್ಟ್ರದ ಗುಣಮಟ್ಟ ಅಲ್ಲಿನ ನಾಗರಿಕರ ಗುಣಮಟ್ಟದ ಮೇಲೆ ನಿರ್ಧಾರವಾದರೇ ನಾಗರಿಕರ ಗುಣಮಟ್ಟ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಶಿಕ್ಷಕರ ಮೇಲೆ
ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ‘ರಾಷ್ಟ್ರನಿರ್ಮಾಪಕರು ಎನ್ನಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕನಿಗೆ ದೇವರ ಸ್ಥಾನವನ್ನು (‘ಆಚಾರ್ಯ ದೇವೋ ಭವ’) ನೀಡಲಾಗಿದೆ. ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಶಿಕ್ಷಕನು ವಿದ್ಯಾರ್ಥಿಗೆ ಎರಡನೇ ಜನ್ಮ ಕೊಡುತ್ತಾನೆಂಬ ಉಲ್ಲೇಖವಿದೆ.
ಸಮಾಜದಲ್ಲಿ ಶಿಕ್ಷಕನ ಪಾತ್ರ, ಅವನ ನಡವಳಿಕೆಗಳು ಅತ್ಯಂತ ಗುರುತರವಾಗಿವೆ. ಅಂದರೆ ಅವನು ಸಮಾಜದ ಒಳ್ಳೆಯ ನಡೆ, ನುಡಿ, ಮಾನವೀಯ ಸಂಬಂಧಗಳು ಹೀಗೆ ಎಲ್ಲವೂಗಳಿಗೂ ಆದರ್ಶಪ್ರಾಯನೂ, ಅನುಕರಣೀಯನೂ ಆಗಿರುತ್ತಾನೆ. ಮನುಷ್ಯನು ತನ್ನ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ನೈತಿಕ ಕಟ್ಟಳೆಗಳನ್ನು ಕಿತ್ತೊಗೆದು ಕುಲಗೆಡದಂತೆ ಕಾಯಲು ಇರುವ ಒಂದು ಪವಿತ್ರ ಬೇಲಿಯೇ ಶಿಕ್ಷಕನಾಗಿದ್ದಾನೆ. ಆ ಬೇಲಿಯೇ ಹೊಲ ಮೇಯ್ದರೇ ಕಥೆಯೇನು..???
ಹೌದು ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಕೆಲವು ಶಿಕ್ಷಕರು ತನ್ನ ಸ್ಥಾನದ ಹಿರಿಮೆ-ಗರಿಮೆಗಳನ್ನು ಮರೆತು ಬಿಟ್ಟಿದ್ದಾರೆ. ತನ್ನ ವೃತ್ತಿಯ ಪಾವಿತ್ರ್ಯತೆಯನ್ನು ಕಡೆಗಣಿಸಿದ್ದಾರೆ. ಕಳೆದ ಕೆಲವು ಚುನಾವಣೆಗಳಿಂದ ಶಿಕ್ಷಕರೆನಿಸಿಕೊಂಡವನ್ನು ಆಸೆ-ಆಮಿಷಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ವಿಷಯ. ಆದರೆ ಸಮಾಜಕ್ಕೆ ಆದರ್ಶಪ್ರಾಯರಾಗಿ ಇರಬೇಕಾದ ಶಿಕ್ಷಕನು 5-10 ಸಾವಿರ ರೂಪಾಯಿಗಳಿಗೆ ತನ್ನನ್ನು ತಾನು ಮಾರಿಕೊಂಡಿದ್ದಾನೆಂಬ ಸುದ್ದಿ ನಿಜಕ್ಕೂ ಆತಂಕಕಾರಿಯಾದುದು. ಇದು ನಮ್ಮ ಸಮಾಜ ಯಾವ ದಿಕ್ಕಿನೆಡೆ ಸಾಗುತ್ತಿದೆ ಎನ್ನುವುದರ ದ್ಯೋತಕವೂ ಕೂಡ ಆಗಿದೆ.
ಭಾನುವಾರದ ಪರಿಷತ್ ಚುನಾವಣೆಯ ದಿನ ಒಂದು ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರ ಬಳಿ ಮಾತಿಗೆ ನಿಂತಾಗ ಅವರ ಮಾತು ಕೇಳಿ ನನಗೆ ಒಮ್ಮೆಲೇ ದಿಗ್ಬ್ರಮೆಯಾಯಿತು. ಸಾರ್ ನಾವು ಎಷ್ಟೋ ಚುನಾವಣೆಗಳನ್ನು ಮಾಡಿದೀವಿ , ಹಣ ಹೆಂಡವನ್ನು ಕೊಟ್ಟಿದ್ದೆವು ಆದರೆ ಈ ಚುನಾವಣೆ ಯಾವುದೇ ಅಮಿಷಕ್ಕಾಗಿ ನಡೆಯುವುದಿಲ್ಲ ಎಂದುಕೊಂಡಿದ್ದೇವು ಆದರೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಕೇಳಲು ಕೆಲವು ಶಿಕ್ಷಕರ ಮುಂದೆ ಹೋದಾಗ ಅವರ ಬೇಡಿಕೆಗಳು ಅಸಹ್ಯ ಹುಟ್ಟಿಸುವಂತೆ ಇತ್ತು ಸಾರ್.. ಹೀಗೆ ಆದರೆ ಮುಂದೆ ಭಾರಿ ಕಷ್ಟ ಸಾರ್ ಎಂದಾಗ ಮನಸ್ಸಿನಲ್ಲಿ ಶಿಕ್ಷಕನೇ ಭ್ರಷ್ಟನಾದರೆ ಜಗ ಕಾಯುವವರಾರು? ಎಂಬ ಭಾವ ಮೂಡತೊಡಗಿತು.
ಇನ್ನೊಂದು ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರ ಬಳಿ ಇದೇ ವಿಚಾರವಾಗಿ ಚರ್ಚೆಗೆ ಹೊರಟಾಗ ಮತ್ತೊಂದು ಅಘಾತಕಾರಿ ಸಂಗತಿ ಹೊರಬಿತ್ತು ಸಾರ್ ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಶಿಕ್ಷಕರುಗಳಿಗೆ ಹಣ , ಹೆಂಡ , ದುಬಾರಿ ಗಿಫ್ಟ್ ಗಳನ್ನು ಹಂಚಲು ವಿವಿಧ ಸಂಘವನ್ನು ಬಳಸಿಕೊಳ್ಳುತಾರೆ ರಾಜಕೀಯ ಪಕ್ಷದವರ ಗಮನಕ್ಕೆ ಬಾರದೇ ಎಲ್ಲವೂ ನಡೆದುಹೋಗಿರುತ್ತದೆ ಎಂದು ಹೇಳಿ ಒಬ್ಬ ಶಿಕ್ಷಕ ನೋಡಿ ಸಾರ್ ಅಲ್ಲಿ ಬೈಕ್ ಲಿ ಕುಳಿತಿದ್ದಾರೆ ಅವರಿಗೆ ನಾವು ಹಣ ಕೊಟ್ಟಿಲ್ಲವೆಂದು ಬೆಳಿಗ್ಗೆಯಿಂದ ಇನ್ನೂ ಮತ ಹಾಕಿಲ್ಲ ಸರ್ ಎಂದಾಗ ಆ ಶಿಕ್ಷಕನ ಕಡೆ ಗಮನಹರಿಸಿದೇ ಅವನು Well Settled ಶಿಕ್ಷಕ ಓಡಾಡಲು ಕಾರು ಬೈಕ್ ಎಲ್ಲವೂ ಇದೆ ಆದರೆ ಆತನಿಗೆ ಮತ(ಮಾತೆಯ)ನ್ನು ಮಾರಿಕೊಳ್ಳುವ ಪರಿಸ್ಥಿತಿ ಯಾಕೆ ಬಂತೋ ಕಾಣೆ..??
ಅಭ್ಯರ್ಥಿಗಳಿಂದ ಶಿಕ್ಷಕರಿಗೆ ತುಂಡು-ಗುಂಡುಗಳ ಪಾರ್ಟಿಯೆಂದು ಪತ್ರಿಕೆಗಳಲ್ಲಿ ಮತ್ತು ಟಿವಿ ಚಾನಲ್‌ಗಳಲ್ಲಿ ಬರುತ್ತಿದ್ದರೆ ಅವರಿಗೆ ಮುಜುಗರವಾಗುವುದಿಲ್ಲವೇ? ಟಿವಿ ಚಾನಲ್‌ಗಳನ್ನು ನೋಡುವ, ಪತ್ರಿಕೆಗಳನ್ನು ಓದುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಶಿಕ್ಷಕನ ಬಗೆಗೆ ಏನೆಂದುಕೊಳ್ಳುತ್ತಾರೆ. ತಾನು ಕಲಿಸುವ ಮಕ್ಕಳ ಮುಂದೆ ಅವನು ಚಿಕ್ಕವನಾಗುದಿಲ್ಲವೆ? ಮನೆಯಲ್ಲಿರುವ ತಮ್ಮ ಮಕ್ಕಳೇ ಈ ಕುರಿತು ಪ್ರಶ್ನಿಸಿದರೆ ಏನು ಹೇಳುತ್ತಾರೆ? ಆಶ್ಚರ್ಯವೆಂದರೆ ಕೆಲವರಿಗೆ ಆ ತೆರನಾದ ಮುಜುಗರವೂ ಇಲ್ಲ, ಭಯವೂ ಇಲ್ಲ. ಶಿಕ್ಷಕರಾಗಿ ಅಷ್ಟೊಂದು ಭಂಡತನ ಮೆರೆಯುವುದು ಸರಿಯೇ?
ಅಭ್ಯರ್ಥಿಗಳು ಪ್ರತಿ ಮತದಾರರನಿಗೂ ಫೋನ್ ಮಾಡಿ ಮತದಾನ ವಿಧಾನವನ್ನು ವಿವರಿಸುವ ನೆಪದಲ್ಲಿ ನಿಮಗೊಂದಿಷ್ಟು ಉಡುಗೊರೆಗಳನ್ನು ತಲುಪಿಸುವುದಿದೆ ಯಾವಾಗ ಬರಬೇಕೆಂದು ಮುಕ್ತವಾಗಿ ಕೇಳುವ ಧೈರ್ಯವನ್ನು ಅಭ್ಯರ್ಥಿಗಳು /ಪಕ್ಷಗಳು ಮಾಡುತ್ತಿವೆ. ಮೊದಲು ಪದವೀಧರರು ಮತ್ತು ಶಿಕ್ಷಕರಿಗೆ ಈ ರೀತಿ ಕೇಳುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ. ಆದರೆ ಈಗ ಸಹಜವೇನೋ ಅನ್ನುವ ರೀತಿಯಲ್ಲಿ ಕೇಳುತ್ತಿರುವುದು ಶಿಕ್ಷಕರು ಮತ್ತು ಪದವೀಧರರು ನೈತಿಕ ಅಧಃಪತನ ಹೊಂದಿರುವುದರ ಸಂಕೇತ, ಇಡೀ ವ್ಯವಸ್ಥೆಯೇ ತನ್ನ ಅರ್ಥವನ್ನು ಕಳೆದುಕೊಂಡಿರುವುದರ ಪ್ರತಿಕ
“ಗುರು ಮುನಿದರೆ ಹರನೂ ಕಾಯಲಾರ ಎನ್ನುವುದೂ ಇನ್ನೊಂದು ನಂಬಿಕೆ. ಆದರೆ ಇಂತಹ ಗುರುವೇ ಭ್ರಷ್ಟನಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವನ್ನು ಯಾರು ಕಾಯಬೇಕು? ಬೇಲಿಯೇ ಎದ್ದು ಹೊಲ ಮೇಯ್ದಿರೆ ಗತಿಯೇನು? ಸಂಪತ್ತು ಕಳೆದು ಹೋದರೆ ಏನೂ ಕಳೆದಂತಲ್ಲ. ದೇಹ ಮತ್ತು ಮಾನಸಿಕ ಆರೋಗ್ಯ ಕಳೆದರೆ ಏನೋ ಕಳೆದುಕೊಂಡಂತೆ, ಆದರೆ ಚಾರಿತ್ರ್ಯವನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ.
ಇಂತಹ ಶಿಕ್ಷಕರು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು? ಮಕ್ಕಳಿಗೆ ಹೇಳಿ ಕೊಡುವ ಆದರ್ಶವಾದರೂ ಏನು? ಅವರಿಗೇನಾದರೂ ನೈತಿಕ ಹಕ್ಕು ಇದೆಯಾ? ಜಗತ್ತಿನ ಯಾವ ಮೂಲೆಯಲ್ಲೂ, ಎಲ್ಲ ಕಾಲಗಳಲ್ಲೂ ಮತ್ತು ಎಲ್ಲರಿಂದಲೂ ಗೌರವಿಸಲ್ಪಡುವ ಗುರುವು ರಾಜಕಾರಣಿಗಳ ಮುಂದೆ ತಲೆ ತಗ್ಗಿಸಿ, ಕೈಯೊಡ್ಡಿ ನಿಂತುಕೊಳ್ಳುವುದು ಎಂಥ ಲಕ್ಷಣ?
ಒಟ್ಟಾರೆಯಾಗಿ ಪರಿಷತ್ ಚುನಾವಣೆ ಸಂಧರ್ಭದಲ್ಲಿ ರಾಜಕೀಯ ಪುಡಾರಿಗಳಂತೆ ವರ್ತಿಸಿ ಅಮಿಷಕ್ಕೊಳಗಾಗುವ ಭ್ರಷ್ಟ , ಭಂಡ ಶಿಕ್ಷಕರ ನಡುವೆ ಕೆಲವೊಂದು ಶಿಕ್ಷಕರು ಇನ್ನೂ ಸರ್ವಪಲ್ಲಿ ಡಾ. ರಾಧಾಕೃಷ್ಣ ಹಾಗೂ ಅಬ್ದುಲ್ ಕಲಾಂ ರವರಂತಹ ಆದರ್ಶಗಳನ್ನು ಉಳಿಸಿಕೊಂಡಿರುವುದು ಸಮಧಾನಕರ ಸಂಗತಿಯಾಗಿದೆ.
ಪ್ರಗತಿಪರರ, ಚಿಂತಕರು, ಸಾಹಿತಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ತಜ್ಞರು ತುಂಬಿರಬೇಕಿದ್ದ ಮೇಲ್ಮನೆಗೆ ಅಭ್ಯರ್ಥಿಗಳು ಮೌಢ್ಯ ಬಿತ್ತಿ ಆ ಮೂಲಕ ಆಯ್ಕೆಯಾಗುತ್ತಿರುವುದು ವಿಪರ್ಯಾಸ. ಮತದಾರರನ್ನು ದೇವರು, ಧರ್ಮ, ನಂಬಿಕೆ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಹಣದ ಕವರ್‌ನೊಂದಿಗೆ ದೇವರ ಫೊಟೊ, ಕುಂಕುಮ, ಹಾಲಿನ ಪೊಟ್ಟಣಗಳ ಮೇಲೆ ಆಣೆ ಮಾಡಿಸಿಕೊಳ್ಳುತ್ತಾರೆ. ಇವೆಲ್ಲವೂ ಗೊತ್ತಿದ್ದರೂ ವ್ಯವಸ್ಥೆ ಬದಲಾವಣೆಗೆ ಯಾರೂ ಮುಂದಾಗದಿರುವುದು ಪ್ರಜಾಪ್ರಭುತ್ವದ ದುರಂತ….!!!!
😡ಬೇಸರದಿಂದ … 🖋ರಫ಼ಿ ರಿಪ್ಪನ್‌ಪೇಟೆ