ಮೀನು ಮಾರಾಟಗಾರರಿಗೆ ಸರ್ಕಾರದಿಂದ ‘ಮತ್ಸ್ಯವಾಹಿನಿ ಯೋಜನೆ’ಯಡಿ ವಾಹನ ನೀಡಲು ಅರ್ಜಿ ಆಹ್ವಾನ
ಮೀನುಗಾರಿಕೆ ಇಲಾಖೆ ಶಿವಮೊಗ್ಗ ವತಿಯಿಂದ ಸ್ಥಳೀಯವಾಗಿ ಮೀನು ಮಾರಾಟ ಸೇವೆಯನ್ನು ಪೋತ್ಸಾಹಿಸಲು ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಕೇಂದ್ರ ಪುರಸ್ಕೃತ ‘ಮತ್ಸ್ಯವಾಹಿನಿ” ಯೋಜನೆಯಡಿ ತ್ರಿಚಕ್ರ ವಾಹನಗಳನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 30-03-2024 ಕಡೆಯ ದಿನ ಆಗಿದ್ದು, ಶಿವಮೊಗ್ಗ ಜಿಲ್ಲೆಗೆ ಒಟ್ಟು 03 ಭೌತಿಕ ಗುರಿ ಇರುತ್ತದೆ. ವೈಯಕ್ತಿಕ ಪರವಾನಿಗೆದಾರರನ್ನು ಆಯ್ಕೆ ಮಾಡುವಾಗ ಪ.ಜಾ/ಪ.ಪಂಗಡ -01, ಮಹಿಳೆ-01 ಮತ್ತು ಸಾಮಾನ್ಯ-0 ಮೀಸಲಾತಿ ನಿಗದಿಪಡಿಸಲಾಗಿದೆ.
ಈಗಾಗಲೇ ನಿಗಮದ ಫ್ರಾಂಚೈಸಿಗಳು ಈ ಯೋಜನೆಯಡಿ ಅವರ ಮೀನು ಮಾರಾಟ ಜಾಲವನ್ನು ವಿಸ್ತರಿಸಲು ಬಯಸಿದಲ್ಲಿ ಅವರಿಗೆ ಆದ್ಯತೆ ನೀಡಲಾಗುವುದು.
ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದವರು, ಮೀನುಗಾರಿಕೆ ಇಲಾಖೆಯಿಂದ ಅನುಮೋದಿತ ಮೀನುಗಾರರ ಉತ್ಪಾದಕ ಸಂಸ್ಥೆಗಳು, ಮೀನು ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರಿಕೆ ಸಹಕಾರ ಸಂಘಗಳು/ಒಕ್ಕೂಟಗಳು, ಮಹಿಳಾ ಸ್ವಸಹಾಯ ಗುಂಪುಗಳು, ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ನಿರುದ್ಯೋಗಿ ಯುವಕ/ಯುವತಿಯರು/ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಫಲಾನುಭವಿಗಳನ್ನು ಆದ್ಯತೆಗನುಸಾಋ ಪರಿಗಣಿಸಲಾಗುವುದು.
ಆಯ್ಕೆಯಾಗುವ ಅರ್ಜಿದಾರರು ಇಲಾಖೆಗೆ ಭದ್ರತಾ ಠೇವಣಿ ಮೊತ್ತ ರೂ. 1.00 ಲಕ್ಷ, ಸಾಮಾನ್ಯ ವರ್ಗದವರು ಮತ್ತು ಪ.ಜಾತಿ/ಪ.ಪಂಗಡ/ಮಹಿಳೆ ರೂ. 0.50 ಲಕ್ಷವನ್ನು ನೀಡಬೇಕಿರುತ್ತದೆ. ಹಾಗೂ ಮಾಸಿಕ ರೂ. 3,000/- ಬಾಡಿಗೆ ಮೊತ್ತವನ್ನು ಪಾವತಿಸಬೇಕಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ಸೊರಬ ಮತ್ತು ತೀರ್ಥಹಳ್ಳಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.