ಕೋಳಿ ತ್ಯಾಜ್ಯಗಳಿಂದ ಮಲೀನವಾಗುತ್ತಿರುವ ಗವಟೂರು ಹೊಳೆಯ ನೀರು – ಕಣ್ಮುಚ್ಚಿ ಕುಳಿತಿದೆ ಗ್ರಾಮಾಡಳಿತ
ರಿಪ್ಪನ್ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪದೇಶಗಳ ಜೀವನದಿಯಾಗಿರುವ ಶರ್ಮಣ್ಯಾವತಿ(ಗವಟೂರು ಹೊಳೆ) ನದಿ ಗ್ರಾಮಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ದಿನೇ ದಿನೆ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶರ್ಮಣ್ಯಾವತಿ ನದಿಯ ಎರಡು ಇಕ್ಕೆಲಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯುವ ಮೂಲಕ ಕಿಡಿಗೇಡಿಗಳು ತಮ್ಮ ವಿಕೃತಿಯನು ಮೆರೆಯುತಿದ್ದು,ಸೂರ್ಯೋದಯಕ್ಕೂ ಮುಂಚೆಯೆ ನದಿಯ ಬಳಿ ಬಂದು ತ್ಯಾಜ್ಯ ಎಸೆಯುತ್ತಾರೆ. ಕಸ, ಕಡ್ಡಿಗಳು, ಮದ್ಯದ ಬಾಟಲಿಗಳು, ವಿವಿಧ ತ್ಯಾಜ್ಯಗಳು, ಪ್ಲಾಸ್ಟಿಕ್ಗಳು, ಮನೆಯ ತ್ಯಾಜ್ಯವೂ ನದಿಯ ಕಡೆಗೆ ಮುಖ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ.
ಪಟ್ಟಣದ ಗ್ರಾಪಂ ಆಡಳಿತದ ಸುಪರ್ದಿಯಲ್ಲಿರುವ ಹತ್ತಾರು ಕೋಳಿ ಅಂಗಡಿಗಳ ತ್ಯಾಜ್ಯವನ್ನು ನದಿಗೆ ಎಸೆಯುತಿದ್ದು ಈ ತ್ಯಾಜ್ಯಗಳಿಂದ ಅಪಾಯಕಾರಿ ಸೊಳ್ಳೆಗಳು ಹಾಗೂ ಇನ್ನಿತರ ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತಿದ್ದು, ಪರಿಸರದಲ್ಲಿ ವಾಸಿಸುವ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನೆದುರಿಸುತ್ತಿದ್ದಾರೆ. ಈ ಪರಿಸರ ದುರ್ವಾಸನೆಯಿಂದ ತುಂಬಿದ್ದು ಈ ಪರಿಸರದಲ್ಲಿ ವಾಸಿಸುವ ಜನ ಮೂಗು ಮುಚ್ಚಿ ತಿರುಗುವಂತಾಗಿದೆ ಎಂದು ಸ್ಥಳಿಯರಾದ ನಾಗೇಂದ್ರ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಈ ನದಿಯಲ್ಲಿರುವ ಮೀನು ಸೇರಿದಂತೆ ಇನ್ನಿತರ ಜಲಚರಗಳು ಹಾಗೂ ದನಕರುಗಳು, ಕಾಡುಪ್ರಾಣಿಗಳು ಈ ಕಲುಷಿತ ನೀರಿನ ಮೇಲೆ ಅವಲಂಬಿತವಾಗಿದೆ. ಈ ನದಿಯ ಪಕ್ಕದಲ್ಲಿಯೇ ರಿಪ್ಪನ್ಪೇಟೆ ಗ್ರಾಮಾಡಳಿತ ಲಕ್ಷಾಂತರ ರೂ ವೆಚ್ಚ ಮಾಡಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಿದ್ದರು ಸಹ ಕಸ ಹಾಗೂ ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕರು ಹಾಗೂ ಕೋಳಿ ಅಂಗಡಿಯವರು ನದಿಗೆ ಎಸೆಯುವ ಕೆಲಸ ಮಾಡುತಿದ್ದಾರೆ.
ಒಂದೆಡೆ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳು ಕಾಲಿಟ್ಟಿವೆ, ನೀರು ನಿಲ್ಲದಂತೆ ನೋಡಿಕೊಳ್ಳಿ ಎಂಬ ಘೋಷಣೆ, ಮತ್ತೊಂದೆಡೆ ಅಲ್ಲಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರಗಳ ನಿರ್ಮಾಣ, ಜತೆಗೆ ನದಿಗೆ ತ್ಯಾಜ್ಯ ಎಸೆಯುವ ಪ್ರಕ್ರಿಯೆ ಇಂದಿಗೂ ಜೀವಂತವಾಗಿದೆ.
ನದಿಗೆ ನಿರಾತಂಕವಾಗಿ ತ್ಯಾಜ್ಯ ಎಸೆಯುವುದು ನಡೆಯುತ್ತಿದ್ದರೆ, ರಸ್ತೆ ಬದಿ ಕಸ ಎಸೆದು ಹೋಗುವವರ ಸಂಖ್ಯೆಯೂ ಕಮ್ಮಿಯಿಲ್ಲ. ಇಕ್ಕೆಲಗಳಲ್ಲೂ ನದಿ ಮಲಿನ ಮಾಡುವವರು ತಮ್ಮ ಈ ವಿಕೃತಿಯನ್ನು ಮುಂದುವರಿಸಿದ್ದಾರೆ. ಸೇತುವೆ ಮೇಲಿನಿಂದ ತ್ಯಾಜ್ಯದ ಕಟ್ಟುಗಳನ್ನು ನದಿಗೆ ಎಸೆದು ವಾಹನಗಳಲ್ಲಿ ತೆರಳುವವರು ಸಂಖ್ಯೆ ಹೆಚ್ಚಾಗಿದೆ.
ಗ್ರಾಮಾಡಳಿತ ಲಕ್ಷಾಂತರ ರೂ ಹಣ ಕಟ್ಟಿಸಿಕೊಂಡು ಕೋಳಿ ಅಂಗಡಿಗಳ ಲೈಸೆನ್ಸ್ ಗಳನ್ನು ನೀಡಿದ್ದು ತ್ಯಾಜ್ಯ ವಿಲೇವಾರಿಗಳ ಸೂಕ್ತವಾದ ಯಾವುದೇ ನಿರ್ದೇಶನಗಳನ್ನು ನೀಡದ ಹಿನ್ನಲೆಯಲ್ಲಿ ಗವಟೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಾಗರೀಕರಲ್ಲಿ ಉಂಟಾಗಿದೆ.
ಒಟ್ಟಾರೆಯಾಗಿ ಈಗಾಗಲೇ ಬಿಸಿಲಿ ತಾಪ ಹೆಚ್ಚಾಗಿದ್ದು ದನಕರುಗಳಿಗೆ,ಪ್ರಾಣಿ ಪಕ್ಷಿ ಸಂಕುಲಕ್ಕೆ ನೀರಿನ ಹಾಹಾಕಾರ ಉಂಟಾಗಿರುವ ಈ ಸಂಧರ್ಭದಲ್ಲಿ ಕಿಡಿಗೇಡಿಗಳು ತ್ಯಾಜ್ಯ ವಸ್ತುಗಳನ್ನು ನದಿಗೆ ಎಸೆಯುವುದರ ಮೂಲಕ ತಮ್ಮ ವಿಕೃತಿ ಮೆರೆಯುತಿದ್ದಾರೆ.