Ripponpete | ಅಡಿಕೆ,ರಬ್ಬರ್ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ರಿಪ್ಪನ್‌ಪೇಟೆ : ಪಟ್ಟಣದ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಒಣಗಿಸಿಡುತಿದ್ದ ಅಡಿಕೆ,ರಬ್ಬರ್ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಪ್ರವೀಣ್ ಶಿವಪುರ , ನಾಗಭೂಷಣ್@ನಾಗ ಶಿವಪುರ ಮತ್ತು ಪ್ರತಾಪ್ ನನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ನಡೆದ ಕಳ್ಳತನದ ಪ್ರಕರಣವನ್ನು ಬೆನ್ನತ್ತಿದ್ದ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತೃತ್ವದ ಸಿಬ್ಬಂದಿಗಳ ತಂಡ ನವೆಂಬರ್ 27 ರಂದು ಮಲೆನಾಡಿಗರಿಗೆ ತಲೆ ನೋವಾಗಿದ್ದ ಬೃಹತ್ ಕಳ್ಳರ ಜಾಲವೊಂದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂದಿಸಿದ್ದರು.ಆದರೆ ಪ್ರಕರಣದಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿಗಳು ಪರಾರಿಯಾಗಿದ್ದರು.
ಪರಾರಿಯಾಗಿದ್ದ ಕಳ್ಳರ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಗುರುವಾರ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಮೂರನೇ ಆರೋಪಿ ಪ್ರತಾಪ್ ನನ್ನು ಹಾಗೂ ಎರಡನೇ ಮತ್ತು ನಾಲ್ಕನೇ ಆರೋಪಿಗಳಾದ ಪ್ರವೀಣ್ ಶಿವಪುರ ಹಾಗೂ ನಾಗಭೂಷಣ ನನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡನೇ ಆರೋಪಿ ಪ್ರವೀಣ್ ಶಿವಪುರ ಮನೆ ಕಳ್ಳತನ ಮಾಡಿ ಕಳೆದ ನಾಲ್ಕೈದು ತಿಂಗಳಿನಿಂದ ತಲೆಮರೆಸಿಕೊಂಡಿದ್ದನು.
ಈ ಪ್ರಕರಣದಲ್ಲಿ ಈಗಾಗಲೇ ರಾಘವೇಂದ್ರ @ರಾಘು ಹರತಾಳು, ಶ್ರೀಧರ್ ನಂಜವಳ್ಳಿ ರವರನ್ನು ಬಂಧಿಸಿ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಹಾಗೂ 50 ಸಾವಿರಕ್ಕೂ ಹೆಚ್ಚು ಮೌಲ್ಯದ ರಬ್ಬರ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿತ್ತು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ಉಮೇಶ್ , ಸಂತೋಷ್ ಕೊರವರ ಮತ್ತು ಮಧುಸೂಧನ್ ಪಾಲ್ಗೊಂಡಿದ್ದರು.
ಕಳ್ಳ ಕಾಕರ ವಿರುದ್ದ ಖಡಕ್ ಸಮರ ಸಾರಿರೋ ಪಿಎಸ್‌ಐ ಪ್ರವೀಣ್ ಯಾರೊಬ್ಬರಿಗೂ ಸೊಪ್ಪು ಹಾಕುತ್ತಿಲ್ಲ. ಅದ್ಯಾರೇ ಭ್ರಷ್ಟರ ಪರ ವಕಾಲತ್ತು ವಹಿಸಿದ್ರೂ ಯಾರಂದ್ರೆ ಯಾರಿಗೂ ಕ್ಯಾರೇ ಅಂತಿಲ್ಲ. ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ದಂಧೆ,ಕಳ್ಳತನ ,ಭ್ರಷ್ಟಾಚಾರ ಗಳ ಹಾವಳಿ ನಿಯಂತ್ರಣಕ್ಕೆ ತೊಡೆ ತಟ್ಟಿ ನಿಂತಿದ್ದಾರೆ.ಪಟ್ಟಣದ ಪೊಲೀಸ್ ಠಾಣೆ ಸದ್ಯ ಒಂದಿಷ್ಟು ಜನಸ್ನೇಹಿ ಆಗಿ ಬದಲಾಗಿದೆ. ಅದ್ಯಾವುದೇ ಬಲಿಷ್ಟ ಕೈಗಳ ಪ್ರಭಾವಗಳೂ ಇಲ್ಲಿ ಲೆಕ್ಕಕ್ಕೆ ಬರೋದೇ ಇಲ್ಲ. ಬಹುತೇಕ ಅದೇನಾಗಬೇಕೋ ಅದೇಲ್ಲ ಕಾನೂನಾತ್ಮಕವಾಗಿಯೇ ನಡೀತಿದೆ.
ಒಟ್ಟಾರೆಯಾಗಿ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಭಾಗದಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಕಂಟಕಪ್ರಾಯವಾಗಿದ್ದ ಈ ಕಳ್ಳರ ಜಾಲವನ್ನು ಪತ್ತೆ ಹಚ್ಚಿದ ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ತಂಡಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.