Headlines

ಶಿಕ್ಷಕರು ಈ ದೇಶದ ಅಭಿವೃದ್ಧಿಯ ಪ್ರತೀಕ: ಲಯನ್ ಎಚ್ ವಾಸಪ್ಪ|teachers day

ಶಿಕ್ಷಕರು ಈ ದೇಶದ ಅಭಿವೃದ್ಧಿಯ ಪ್ರತೀಕ: ಲಯನ್ ಎಚ್ ವಾಸಪ್ಪ
ಮಾಸ್ತಿಕಟ್ಟೆ : ಲಯನ್ಸ್ ಕ್ಲಬ್ ವರಾಹಿ, ಮಾಸ್ತಿ ಕಟ್ಟೆ ಹಾಗೂ ಕರ್ನಾಟಕ ವಿದ್ಯುತ್ ನಿಗಮ ಕೆಪಿಸಿ ಇವರ ವತಿಯಿಂದ ಕೆಪಿಸಿ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನೆರವೇರಿಸಲಾಯಿತು.

ವರಾಹಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಎಚ್ ವಾಸಪ್ಪ ಮಾತನಾಡಿ ಒಬ್ಬ ಸಾಮಾನ್ಯ ಶಿಕ್ಷಕನಾಗಿ ಶಿಕ್ಷಣ , ಸಾಹಿತ್ಯ, ರಾಜಕೀಯ ಇನ್ನು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸಾಧನೆ ಗೈದು ಎರಡು ಬಾರಿ ಭಾರತದ ಉಪ ರಾಷ್ಟ್ರಪತಿಗಳಾಗಿ, ಹಾಗೂ ಈ ದೇಶದ ರಾಷ್ಟ್ರಪತಿಗಳಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ರೂಪಿಸಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅತ್ಯುತ್ತಮ ನೀತಿಗಳನ್ನು ಅಳವಡಿಸಿಕೊಂಡು ಅನೇಕ ವಿಶ್ವವಿದ್ಯಾಲಯಗಳ ಉಪಕುಲಪತಿಗಳಾಗಿ, ರಾಷ್ಟ್ರ ಹಾಗೂ ಹೊರ ರಾಷ್ಟ್ರಗಳ ಅನೇಕ ಪ್ರಶಸ್ತಿಗಳನ್ನು ಪಡೆದು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನವನ್ನು ಪಡೆದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ದಂದು ನಡೆಸುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಪ್ರತಿಯೊಬ್ಬ ಶಿಕ್ಷಕನಿಗೆ ಆದರ್ಶಪ್ರಾಯವಾಗಿದೆ.

ಆ ನಿಟ್ಟಿನಲ್ಲಿ ಸಮಾಜದ, ದೇಶದ ಅಭಿವೃದ್ಧಿಗೆ ಶಿಕ್ಷಣ ಬಹು ಮುಖ್ಯ ಪಾತ್ರ ವಹಿಸಿದ್ದು ಶಿಕ್ಷಕರಾದವರು ಮಕ್ಕಳ ಮನೋಭಿಲಾಷೆಗೆ ತಕ್ಕಂತೆ ಅವರ ಪ್ರತಿಭೆಗಳನ್ನು ಅರಿತು ಅವರ ಅಂಕು ಡೊಂಕುಗಳನ್ನು ತಿದ್ದಿ  ಉತ್ತಮ ಪ್ರಜೆಗಳನ್ನಾಗಿ ಮಾಡುವ ಕಾರ್ಯ ಶಿಕ್ಷಕರಿಂದ ನಡೆಯಬೇಕಿದೆ.
ಅದಕ್ಕಾಗಿ ಈ ಸಂದರ್ಭದಲ್ಲಿ ನಮ್ಮ ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರಿಗೆ  ಅಭಿನಂದನ ಪೂರ್ವಕವಾಗಿ ಶುಭಾಶಯ ಗಳನ್ನು ಕೋರುತ್ತಿದ್ದೇವೆ.
ಪ್ರತಿಯೊಬ್ಬ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಪ್ರೀತಿ-ವಿಶ್ವಾಸ ಪ್ರಾಮಾಣಿಕತೆ ಬದ್ಧತೆಯಿಂದ ತಮ್ಮ ವೃತ್ತಿ ಜೀವನವನ್ನು ನಡೆಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಮಾನತೆಯಿಂದ ಕಂಡು ಅವರನ್ನು ಅತ್ಯುತ್ತಮ ನಾಗರಿಕರನ್ನಾಗಿ ಮಾಡುವ ಕೆಲಸ ತಮ್ಮದಾಗಿದೆ ಎಂದು ತಿಳಿಸುತ್ತಾ ಶಿಕ್ಷಕ ವೃಂದದವರಿಗೆ ಅಭಿನಂದಿಸಿ ಶುಭ ಹಾರೈಸಿದರು.

ಶಾಲಾ ದೈಹಿಕ ಶಿಕ್ಷಕರಾದ ವಸಂತಕುಮಾರ್ ಅವರು ಡಾ. ರಾಧಾಕೃಷ್ಣನ್ ಅವರ ಪರಿಚಯವನ್ನು ಸಭೆಗೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಕೆಪಿಸಿ ಕಾರ್ಯವಾಹಕ ಅಭಿಯಂತರರಾದ ಗೋಪಾಲಕೃಷ್ಣ ಶಾಸ್ತ್ರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಅಭಿವೃದ್ಧಿಗೆ, ಉತ್ತಮ ಶಿಕ್ಷಣಕ್ಕೆ ಶಿಕ್ಷಕರು, ಪೋಷಕರು ಹಾಗೂ ಸಮಾಜದ ಪಾತ್ರ ಬಹುಮುಖ್ಯವಾಗಿದ್ದು ನಾವೆಲ್ಲರೂ ಉತ್ತಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಭರಿತ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದರು.

 ವೇದಿಕೆಯಲ್ಲಿ ಲಯನ್ ಎಚ್ ಕೆ ವಿದ್ಯಾನಂದ ರಾವ್, ನಿಗಮದ ಎ ಜಿ ಎಂ (ಎಫ್) ರವೀಂದ್ರ ಕೆ, ಶಾಲಾ ಮುಖ್ಯೋಪಾಧ್ಯಾಯರುಗಳಾದ ಕೃಷ್ಣಗೊಂಡ, ಮೇರಿ ಕ್ರಿಸ್ಟಿನಾ, ಪೋಷಕ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದು ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಮಾತನಾಡಿ ಎಲ್ಲಾ ಶಿಕ್ಷಕ ವೃಂದದವರಿಗೆ ಅಭಿನಂದಿಸಿ ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ ಈ ಹಿಂದೆ ತಾಲೂಕು ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ ಪಡೆದ ವಸಂತ್ ಕುಮಾರ್ ಇವರನ್ನು ಲಯನ್ಸ್  ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.ಆಗಮಿಸಿದ ಪ್ರತಿಯೊಬ್ಬ ಶಿಕ್ಷಕರಿಗೂ ಪೆನ್ನುಗಳನ್ನು ಹಾಗೂ ಪುಸ್ತಕಗಳನ್ನು ನೀಡಿ ಅಭಿನಂದಿಸಿ ಶುಭ ಕೋರಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಸಂಸ್ಥೆಯ ಪದಾಧಿಕಾರಿಗಳು,ಕೆಪಿಸಿ ಅಧಿಕಾರಿಗಳು, ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ಪೋಷಕರು, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು .ಲಯನ್ ಎಚ್ ಕೆ ವಿದ್ಯಾನಂದರಾವ್ ಎಲ್ಲರನ್ನು ಸ್ವಾಗತಿಸಿದರು, ಎಸ್ ಕೆ  ಗೋಪಾಲ್ ಗೌಡ ಆಗಮಿಸಿದ ಸರ್ವರನ್ನು ವಂದಿಸಿದರು.

Leave a Reply

Your email address will not be published. Required fields are marked *