Headlines

ಅನಧಿಕೃತ ರೈಲ್ವೆ ಟಿಕೆಟ್ ಬುಕ್ಕಿಂಗ್ – ಮೂವರು ಆರೋಪಿಗಳ ಬಂಧನ|arrested

ಅನಧಿಕೃತ ರೈಲ್ವೆ ಟಿಕೆಟ್ ಬುಕ್ಕಿಂಗ್ – ಮೂವರು ಆರೋಪಿಗಳ ಬಂಧನ|arrested

ರೈಲ್ವೆ ಇಲಾಖೆಯ ಅನುಮತಿ ಇಲ್ಲದೆ ಅನಧಿಕೃತವಾಗಿ ಟಿಕೆಟ್ ಬುಕಿಂಗ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಬಂಧಿಸಿದೆ.

ತಾಳಗುಪ್ಪದ ಶ್ರೀ ರೇಣುಕಾ ಸೈಬರ್ ಸೆಂಟರ್​ನ ಗಣೇಶ್ ರಾಮ್ ನಾಯಕ್ (31), ಸಂವಹನ ಮೊಬೈಲ್ ಶಾಪ್​ನ ರೇವಣ್ಣಪ್ಪ (36) ಹಾಗೂ ಆರ್ಯ ಸೈಬರ್​ನ ಪ್ರಶಾಂತ್ ಹೆಗಡೆ (46) ಬಂಧಿತ ಆರೋಪಿಗಳು.

ಮುಂಬರುವ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಪ್ರಯಾಣಿಕರಿಗೆ ಆಗುವ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ವತಿಯಿಂದ ತಾಳಗುಪ್ಪದಲ್ಲಿನ ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್ ವಿರುದ್ಧ ಯೋಜನೆ ರೂಪಿಸಲಾಗಿತ್ತು. ಅದರಂತೆ ದಾಳಿ ನಡೆಸಿ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಹಬ್ಬ ಹರಿದಿನದಂತಹ ಒತ್ತಡದ ಸಮಯದಲ್ಲಿ ಬೇರೆ ಬೇರೆ ಫೋನ್​ ಸಂಖ್ಯೆಗಳಿಗೆ ಲಿಂಕ್ ಆದ ಬಹುವ್ಯಕ್ತಿ ಐಡಿಗಳನ್ನು ಸೃಷ್ಟಿಸಿ ಮತ್ತು ಅನಧಿಕೃತವಾಗಿ ಇ-ಟಿಕೆಟ್ ಜನರೇಟ್ ಮಾಡಿ ಜನರಿಂದ ಹೆಚ್ಚಿನ ಕಮಿಷನ್‍ ಪಡೆಯುವುದು ಈ ಗ್ಯಾಂಗ್‍ಗಳ ಕೆಲಸವಾಗಿತ್ತು. “ರೈಲ್ವೆ ಪ್ರಯಾಣಿಕರನ್ನು ಗುರಿಯಾಗಿಸುವ ಅನಧಿಕೃತ ಟ್ರಾವೆಲ್ ಏಜೆಂಟ್‍ಗಳ ವಿರುದ್ಧ ಇಂತಹ ಬೃಹತ್ ದಾಳಿಗಳನ್ನು ಮುಂದುವರಿಸಲಾಗುವುದು. ಹಾಗೂ ಪ್ರಯಾಣಿಕರಿಗೆ ಆಗುವ ಅನಾನುಕೂಲದಿಂದ ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು” ಎಂದು ಮೈಸೂರು ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್ ಶಿಲ್ಪಿ ಅಗರ್ವಾಲ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಇಂತಹ ಟ್ರಾವೆಲ್ ಏಜೆಂಟ್‍ಗಳೊಂದಿಗೆ ಜಾಗರೂಕರಾಗಿರಿ. ಅವರ ದುರಾಸೆಗೆ ಬೀಳದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೂರು ಸೈಬರ್ ಸೆಂಟರ್​ಗಳ ಮೇಲೆ ದಾಳಿ ನಡೆಸಿ ಅನಧಿಕೃತ ಟಿಕೆಟ್​ ಬುಕ್ ಮಾಡುವ ಗ್ಯಾಂಗ್​ಗಳನ್ನು ಪತ್ತೆಹಚ್ಚಲಾಗಿದೆ. ಪ್ರಯಾಣಿಕರಿಗೆ ವಿಪರೀತ ಶುಲ್ಕ ವಿಧಿಸುವ ಮೂಲಕ ಇ-ಟಿಕೆಟ್‍ಗಳನ್ನು ಖರೀದಿಸಲು ಬಳಸುತ್ತಿದ್ದ ಒಟ್ಟು ರೂ. 2.5 ಲಕ್ಷ ಮೌಲ್ಯದ ರೈಲ್ವೆ ಇ-ಟಿಕೆಟ್‍ಗಳು ಮತ್ತು 1.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೆ ಕೆ ಶರ್ಮಾ, ಐಆರ್​ಪಿಎಫ್​ಎಸ್ ವಿಭಾಗೀಯ ಭದ್ರತಾ ಆಯುಕ್ತರು ಹಾಗೂ ಆರ್​ಪಿಎಫ್ ಮೈಸೂರು ಇವರ ನಿರ್ದೇಶನದಂತೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ. ತಂಡದಲ್ಲಿ ಅಪರಾಧ ನಿರೀಕ್ಷಕ ಎಂ ನಿಶಾದ್, ಸಬ್ ಇನ್ಸ್​‍ಪೆಕ್ಟರ್ ಬಿ ಚಂದ್ರಶೇಖರ್, ಸಹಾಯಕ ಸಬ್ ಇನ್ಸ್​‍ಪೆಕ್ಟರ್​ಗಳಾದ ವೆಂಕಟೇಶ್ ಮತ್ತು ಈಶ್ವರ್ ರಾವ್, ಹೆಡ್ ಕಾನ್ಸ್​ಟೇಬಲ್ ಡಿ ಚೇತನ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *