Headlines

ತೆರೆದ ಬಾವಿಗೆ ಬಿದ್ದ ಕಾಡೆಮ್ಮೆ ಮರಿ – ಅರಣ್ಯ ಇಲಾಖೆಯಿಂದ ರಕ್ಷಣೆ|rescue

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದ ಅರವತ್ತು ಅಡಿ ಆಳದ ತೆರೆದ ಬಾವಿಗೆ ಕಾಡೆಮ್ಮೆಯ ಎರಡು ವರ್ಷದ ಮರಿಯೊಂದು ಆಕಸ್ಮಿಕವಾಗಿ ಬಿದ್ದ ಘಟನೆ ಬುಧವಾರ ನಡೆಯಿತು.

ಬಾವಿಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದ ಕಾಡೆಮ್ಮೆ ಮರಿಯನ್ನು ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕರುವಿನ ಕೋಡಿಗೆ ಹಗ್ಗ ಹಾಕಿ ಮುಳುಗದಂತೆ ಎಚ್ಚರ ವಹಿಸಿದರು.

ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞ ಡಾ. ಮುರಳಿ ಮನೋಹರ್ ಆಗಮಿಸಿ ಕರುವಿಗೆ ಅರಿವಳಿಕೆ ನೀಡಿದರು. ನಂತರದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಇಳಿದು, ಕರುವಿನ ಹೊಟ್ಟೆಗೆ ದೃಢವಾದ ಬೆಲ್ಟ್ ಬಿಗಿದರು. ಬಳಿಕ ಕ್ರೇನ್ ಮೂಲಕ ಕಾಡೆಮ್ಮೆ ಕರುವನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಮೇಲಕ್ಕೆತ್ತಲಾಯಿತು.

ಇಡೀ ಕಾರ್ಯಾಚರಣೆಯ ನೇತೃತ್ವವನ್ನು ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆಂಚಪ್ಪ ವಹಿಸಿದ್ದರು. ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಲಯ ಅರಣ್ಯ ಅಧಿಕಾರಿ ಮೋಹನ್, ಉಪ ವಲಯಾರಣ್ಯಧಿಕಾರಿ ಅಶೋಕ್ ಇದ್ದರು. ಕಲ್ಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಶೆಟ್ಟಿ ಹೊಸೂರು, ಮಾಜಿ ಅಧ್ಯಕ್ಷ ಅಕ್ಷರ ಎಲ್.ವಿ., ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಗೋಳಿಕೊಪ್ಪ, ಅಖಿಲೇಶ್ ಚಿಪ್ಪಳಿ ಸಹಕರಿಸಿದರು.

Leave a Reply

Your email address will not be published. Required fields are marked *