ಬೆಳಗಾವಿ ಜಿಲ್ಲೆಯ ಚಿಕ್ಕೂಡಿ ತಾಲೂಕಿನ ಹಿರೇಕೊಡಿ ನಂದಿ ಪರ್ವತದ ಜೈನ್ ಮಂದಿರದ ಆಚಾರ್ಯ 108 ಕಾಮಕುಮಾರ ನಂದಿ ಮುನಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಸರ್ವಸಂಗ ಪರಿತ್ಯಾಗಿಗಳಾಗಿರುವ ಜೈನ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಅಲ್ಲದೇ ಅವರ ಹತ್ಯೆ ನಡೆದು ಮೂರು ದಿನವಾಗಿದ್ದು, ಸರ್ಕಾರ ಇನ್ನೂ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ಈ ಹತ್ಯೆಯಲ್ಲಿ ಸಾಕಷ್ಟು ಜನರ ಕಾಣದ ಕೈಗಳಿವೆ. ಕೇವಲ ದುಡ್ಡಿನ ವಿಚಾರವಾಗಿ ತನಿಖೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವುದರ ಮೂಲಕ ದಾರಿ ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹರತಾಳು ಹಾಲಪ್ಪ, ಡಾ.ರಾಜನಂದಿನಿ ಕಾಗೋಡು, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ ಸೇರಿದಂತೆ ಕಾರ್ಯಕರ್ತರ ನೇತೃತ್ವದಲ್ಲಿ ಎಸಿ ಅವರಿಗೆ ಮನವಿಯನ್ನು ಕೊಟ್ಟು ಸರ್ಕಾರಕ್ಕೆ ತನಿಖೆ ಮಾಡಲು ಒತ್ತಾಯ ಮಾಡುತ್ತಿದ್ದೇವೆ. ಕೊಲೆ ನಡೆದು ಎರಡು ದಿನಗಳಾದರೂ ಘಟನಾ ಸ್ಥಳಕ್ಕೆ ಸಿಎಂ ಹಾಗೂ ಗೃಹ ಸಚಿವರುಗಳು ಭೇಟಿ ನೀಡದೇ ಇರುವುದು ಖಂಡನೀಯವಾಗಿದೆ. ಕೊಲೆಗಾರರ ಹೆಸರನ್ನು ಬಹಿರಂಗಪಡಿಸದೇ ಸರ್ಕಾರ ಅವರ ರಕ್ಷಣೆ ಮಾಡಲು ಮುಂದಾಗಿದೆ.
ಇದರಿಂದ ಕೊಲೆಯ ಕುರಿತು ಸೂಕ್ತ ತನಿಖೆ ನಡೆಸಿ ಕೊಲೆಗಾರರಿಗೆ ಸೂಕ್ತ ಶಿಕ್ಷೆ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೇವಲ ಎರಡು ತಿಂಗಳಲ್ಲಿ ಜೈನ ಮುನಿಗಳ ಹಾಗೂ ವೇಣುಗೋಪಾಲ ಅವರ ಹತ್ಯೆ ನಡೆದಿವೆ. ಇದರಿಂದ ಬಿಜೆಪಿ ಖಂಡಿಸುತ್ತದೆ. ತಕ್ಷಣ ಎರಡು ಕೊಲೆಗಳ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಬಿ.ವೈ.ರಾಘವೇಂದ್ರ ಆಗ್ರಹಿಸಿದರು.


