ಕ್ರಿಕೆಟ್ ಬೆಟ್ಟಿಂಗ್ ನಿಂದ ಜೀವ ಕಳೆದುಕೊಂಡನಾ ತೀರ್ಥಹಳ್ಳಿಯ ಯುವಕ !?
ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲಿನಲ್ಲಿ ಮೊಬೈಲ್ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಿಥುನ್ ಶೆಟ್ಟಿ ( 22 ವರ್ಷ) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾನೆ. ಮಿಥುನ್ ಶೆಟ್ಟಿ ಉತ್ತಮ ಕ್ರಿಕೆಟ್ ಪಟುವಾಗಿದ್ದು, ಆನ್ ಲೈನ್ ಬೆಟ್ಟಿಂಗ್ ಗೆ ಬಲಿಯಾಗಿರುವುದಾಗಿ ನೆರೆಹೊರೆಯವರ ಆರೋಪವಾಗಿದೆ.
ಆನ್ ಲೈನ್ ಬೆಟ್ಟಿಂಗ್ ನಿಂದಾಗಿ ಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಅತೀ ಹೆಚ್ಚು ಸಾಲವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತು ಸ್ಥಳೀಯರು ಆಡುತ್ತಿದ್ದಾರೆ. ಆದರೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದಾಖಲಾಗಿದ್ದು ಈ ಸಾವಿನ ಬಗ್ಗೆ ಸಮಗ್ರ ತನಿಖೆ ನೆಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.