ಶಿಕಾರಿಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಗೋ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಸೋಮವಾರ ನಡೆದ ಶಿಕಾರಿಪುರ ಸ್ವಯಂ ಪ್ರೇರಿತ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ಸೂಚಿಸಿದರು.
ಬಸ್ ಗಳ ಓಡಾಟ ಸಹಜವಾಗಿತ್ತು. ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೋಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಜಾಥಾ ನಡೆಯಿತು. ಸಾವಿರಾರು ಯುವಕರು ಗೋಹತ್ಯೆ ರಕ್ಷಣೆ ಹಾಗೂ ಗೋ ಹತ್ಯೆ ಖಂಡಿಸಿ ಘೋಷಣೆ ಕೂಗುತ್ತಾ ಸಾಗಿದರು. ಜಾಗೃತಿ ಜಾಥಾ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಪೊಲೀಸ್ ಬಿಗಿಬಂದೋಬಸ್ತ್ ಆಯೋಜಿಸಲಾಗಿತ್ತು.
ಜನ ಜಾಗೃತಿ ಜಾಥಾ ನಂತರ ಸಾಂಸ್ಕೃತಿಕ ಭವನದಲ್ಲಿ ಜನ ಜಾಗೃತಿ ಸಭೆ ನಡೆಯಿತು. ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಕಳ ಶ್ರೀಕಾಂತ್ ಪ್ರಮುಖವಾಗಿ ಭಾಷಣ ಮಾಡಿದರು.
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಸತೀಶ್ ದಾವಣಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ, ಆರ್ ಎಸ್ ಎಸ್ ಸಾಗರ ಜಿಲ್ಲಾ ಕಾರ್ಯವಾಹ ಶ್ರೀಧರ್ ನಿಸಾರಣಿ ಉಪಸ್ಥಿತರಿದ್ದರು.



