ಈ ಡಿಜಿಟಲ್ APP ಗಳ ಮೂಲಕ ಸಾಲ ನೀಡುವ ಅಕ್ರಮ ಕಂಪನಿಗಳು ಜನರಿಗೆ ಕಿರುಕುಳ ನೀಡಿವೆ. ಈ ಕಂಪನಿಗಳು ಸಾಲ ನೀಡಿ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಯತ್ನಿಸಿದಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ.
ರಾಜಧಾನಿಯಲ್ಲಿ 2023ರಲ್ಲಿ ಲೋನ್ APP ಕಂಪೆನಿಗಳ ಕಿರುಕುಳದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಒಂದೇ ಪ್ರಕರಣದಲ್ಲಿ 15 ಲೋನ್ APP ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಪೊಲೀಸರು ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗಿರುವ 15 APP ಯಾವುವು :
ಈಸಿ ಮನಿ ಲೋನ್ , ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಪ್ಯಾಕೆಟ್ ಮೀ, ಗೆಟ್ ರುಪಿ, ಇಸ್ ಕ್ಯಾಸ್, ಮನಿ, ರೈನ್ ಬೌ ಮನಿ, ಮ್ಯಾಜಿಕ್ ಲೋನ್, ಹೋಮ್ ಕೇಸ್ ಡೆಲ್ಲಿಕ್ರೆಡಿಟ್, ಶೈನಿ ಲೋನ್, ಗೋಮನಿ, ಕೂಲ್ ರುಪಿ ಲಟ್ರ, ನಾನ್ ರುಪಿ ಲೋನ್ APPಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿರುವ ಖಾಕಿ ಪಡೆಯು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಆನ್ಲೈನ್ APP ಮೂಲಕ ಸಾಲ ಪಡೆದಿದ್ದ ದೂರುದಾರರೊಬ್ಬರು ಕೆಲ ದಿನಗಳ ಬಳಿಕ ಸಾಲ ಮರುಪಾವತಿಸಿದ್ದರು. ಆದರೂ, ಸೈಬರ್ ದುರುಳರು ದೂರುದಾರರ ಆಧಾರ್ ಮತ್ತು ಪಾನ್ ಮೂಲಕ ವೈಯಕ್ತಿಕ ಮಾಹಿತಿ ಕದ್ದಿದ್ದರು. ಅವರ ಮೊಬೈಲ್ ಸಹ ಹ್ಯಾಕ್ ಮಾಡಿದ್ದರು. ಅವರ ಭಾವಚಿತ್ರವನ್ನು ಮಾರ್ಫಿಂಗ್ ಮಾಡಿ ಅಶ್ಲೀಲ ವಿಡಿಯೊದೊಂದಿಗೆ ಜೋಡಿಸಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ವಾಟ್ಯಾಪ್ಸ್ ಸಂಖ್ಯೆಗೆ ಕಳುಹಿಸಿ ಮಾನ ಹರಾಜಿಗೆ ಯತ್ನಿಸಿದ್ದರು. ದೂರುದಾರರು ಈ ಸಂಬಂಧ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು.
ಸಾವಿರಾರು ಮಂದಿ ಆನ್ಲೈನ್ ಲೋನ್ APPಗಳಿಂದ ಸಾಲ ಪಡೆದು ವಂಚನೆಗೆ ಒಳಗಾಗುತ್ತಿದ್ದಾರೆ. ಈ ಪ್ರಕರಣಗಳ ಬೆನ್ನತ್ತಿದರೆ ಕರ್ನಾಟಕದವರೇ ಸಿಕ್ಕಿ ಬೀಳುತ್ತಿದ್ದಾರೆ. ಹೊರ ರಾಜ್ಯ, ವಿದೇಶದಲ್ಲಿ ಕುಳಿತು ನಕಲಿ ಜಾಲ ಸೃಷ್ಟಿಸಿರುವ ವಂಚಕರು ಪತ್ತೆಯಾಗುತ್ತಿಲ್ಲ. ಲೋನ್ APP ಬ್ಯಾಂಕ್ ಖಾತೆಗಳಿಂದ ಈವರೆಗೆ 87 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತರಾದ ಶರಣಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.
ಲೋನ್ ಕಟ್ಟಿಲ್ಲವೆಂದು ಟಾರ್ಚರ್, ನೇಣಿಗೆ ಶರಣಾದ ವಿದ್ಯಾರ್ಥಿ :
ಚೀನಾ APP ಮೂಲಕ ಲೋನ್ ಪಡೆದಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವಂತಹ ಘಟನೆ ಬೆಂಗಳೂರು ನಗರದ ಹೆಚ್ಎಂಟಿ ಕ್ವಾರ್ಟರ್ಸ್ನಲ್ಲಿ ನಡೆದಿದೆ.
ತೇಜಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸ್ನೇಹಿತ ಮಹೇಶ್ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ಕೊಟ್ಟವರು ಟಾರ್ಚರ್ ನೀಡುತ್ತಿದ್ದರಂತೆ. ಹಾಗಾಗಿ ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
‘ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ’ ‘ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ, ಇದು ನನ್ನ ಕೊನೆ ತೀರ್ಮಾನ’ ‘ಥ್ಯಾಂಕ್ಸ್ ಗುಡ್ ಬೈ’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಗೆ ತೇಜಸ್ ಪೋಷಕರು ದೂರು ನೀಡಿದಿದ್ದಾರೆ.