ಬೇಕೆನ್ನುವುದೇ ನರಕ – ಸಾಕೆನ್ನುವುದೇ ಮನುಜ ಮಾರ್ಗ | ಜೀವಿಗಳು ಪರಸ್ಪರ ಉಪಕಾರ ಭಾವನೆಯಿಂದ ಬದುಕಬೇಕು ; ಹೊಂಬುಜ ಶ್ರೀಗಳು|hombuja – matt

ಹೊಂಬುಜ : ಅಹಿಂಸೆಯಿಂದಲೇ ವಿಶ್ವಶಾಂತಿ ಸಂದೇಶದ ಮೂಲಕ ಸಕಲ ಜೀವಿಗಳಿಗೂ ಶಾಂತಿ ಬಯಸಿದ ಭ. ಮಹಾವೀರ ತೀರ್ಥಂಕರರ ಜನ್ಮ-ಜಯಂತಿಯನ್ನು ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಹೊಂಬುಜದಲ್ಲಿ ಇಂದು ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳ್ಳಿಗ್ಗೆ 8:00 ಕ್ಕೆ ಭ|| ಮಹಾವೀರ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ ನೆರವೇರಿದವು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ಮನುಷ್ಯನು ಕೃತಕವಾಗಿ ಮಾಡುವ ಹಿಂಸೆಗಿಂತ ಮಾನಸಿಕವಾಗಿ ಮಾಡುವ ಹಿಂಸೆಯೇ ಮಹಾಪಾಪವೆಂದು ಮಹಾವೀರರು ಹೇಳಿದರು. ಪ್ರತಿಯೊಂದು ಜೀವಿಯು ಬದುಕುವ ಹಕ್ಕನ್ನು ಹೊಂದಿದ್ದು ಕರುಣೆಯಿಂದ ಜೀವಿಗಳನ್ನು ನೋಡಬೇಕೆಂದು ಉಪದೇಶಿಸಿದರು.

ಮನುಷ್ಯನ ಚಿಂತೆಗಳಿಗೆ ಅಂತ್ಯವಿಲ್ಲ. ಪ್ರತಿಕ್ಷಣ ಒಂದಿಲ್ಲೊಂದು ಸಮಸ್ಯೆಯ ಪರಿಹಾರದ ಬಗ್ಗೆ ಚಿಂತಿಸುತ್ತಾ ಇರುತ್ತಾನೆ. ಶಾಶ್ವತ ಪರಿಹಾರವನ್ನು ಬಯಸುತ್ತಾನೆ. ಮಹಾವೀರರು ಈ ಬಗ್ಗೆ ಅನೇಕಾಂತವಾದವೆಂಬ ವೈಚಾರಿಕ ಪದ್ಧತಿಯನ್ನು ಪರಿಚಯಿಸಿದರು. ಮನುಷ್ಯನು ಚಿಂತಿಸುವ ಕ್ರಮದಲ್ಲೇ ಚಿಂತೆಯ ಪರಿಹಾರವಿದೆ. ಸಮಸ್ಯೆಯ ಒಂದು ಮುಖವನ್ನು ಗ್ರಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಯ ಸಮಗ್ರ ಚಿಂತನೆ ಮಾಡಿದಾಗ ಒಂದು ಪರಿಹಾರ ಸಿಗುತ್ತದೆ.

ಈ ಪ್ರಪಂಚದಲ್ಲಿ ಸಾಮಾಜಿಕ ಅಸಮತೋಲನವೆಂಬುದು ಅನಾದಿಕಾಲದಿಂದಲೂ ಬಂದಿದೆ. ಇದರ ಪರಿಹಾರಕ್ಕಾಗಿ ಕಾಲ ಕಾಲಕ್ಕೆ ಮಹಾಪುರುಷರು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ. ಮಹಾವೀರರ ಸಮಕಾಲಿನರಾದ ಗೌತಮ ಬುದ್ದರು ಕೂಡ ಈ ಪ್ರಯತ್ನ ಮಾಡಿದ್ದರು. ಅದಕ್ಕಾಗಿ ಅಪರಿಗ್ರಹ ಎಂಬ ತತ್ವವನ್ನು ಮಹಾವೀರರು ಬೋಧಿಸಿದರು. ಮನುಷ್ಯನ ಆಸೆ-ಆಕಾಂಕ್ಷೆಗಳಿಗೆ ಮಿತಿಯಿಲ್ಲ. ನಿರಂತರ ಅಪೇಕ್ಷೆಯಿಂದ ಮಾನಸಿಕ ಅಸಮತೋಲನವಾಗುತ್ತದೆ. ಎಲ್ಲದಕ್ಕೂ ಮಿತಿಯಿರಬೇಕು. ತನ್ನ ಹಾಗೂ ಪರಿವಾರದ ಸುಖಿ ಜೀವನಕ್ಕಾಗಿ ಬೇಕಾಗುವಷ್ಟು ಸಂಪತ್ತನ್ನು ಹೊರತುಪಡಿಸಿ ಉಳಿದದನ್ನು ಸಮಾಜದ ವಿವಿಧ ಸೇವೆಗೆ ಬಳಸಬೇಕೆಂದು ಆದೇಶಿಸಿದರು. “ಬೇಕೆನ್ನುವುದೇ ನರಕ, ಸಾಕೆನ್ನುವುದೇ ಮನುಜ ಮಾರ್ಗ”. ಈ ಲೋಕದಲ್ಲಿ ಬದುಕಬೇಕೆಂದರೆ ನಾವೊಬ್ಬರೇ ಬದುಕಲು ಸಾಧ್ಯವಿಲ್ಲ. ನಮ್ಮ ಪರಿಸರದ ಸಹಕಾರ ಅಗತ್ಯ. ಪರಸ್ಪರ ಜೀವಿಗಳು ಉಪಕಾರ ಭಾವನೆಯಿಂದ ಬದುಕಬೇಕು. ಬದುಕನ್ನು ಪ್ರೀತಿಸುವ ಕಲೆ ಮಹಾವೀರರು ಹೇಳಿದರು.


ಮಹಾಪುರುಷರ ನಡೆ-ನುಡಿಗಳು ಯಾವಾಗಲೂ ಆದರ್ಶವಾಗಿರುತ್ತವೆ. ಗುಡಿ-ಗೋಪುರಗಳನ್ನು ಕಟ್ಟಿ ಪೂಜಿಸುವುದು ಅವರ ಆದರ್ಶ ಗುಣಗಳನ್ನು ಹೊಂದಲೆಂದೇ ವಿನಾ ನಮ್ಮ ಶಕ್ತಿಯ ಅನಾವರಣಕ್ಕಾಗಿ ಅಲ್ಲ. ಮಹೋತ್ಸವ ಜಯಂತಿಗಳು ಸದಾ ನಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಲು ನೆರವಾಗಬೇಕು ಅಲ್ಲದೇ ಆಡಂಬರವಾಗಬಾರದು. ಅವರ ಆಚರಣೆಗಳಿಂದ ನಮ್ಮಗಳ ಚಲನೆ (ಆಚರಣೆ) ಸರಿದಾರಿಗೆ ಬರಲೆಂಬುದೇ ಉದ್ಧೇಶ ಎಂದರು.

ನಂತರ ಮಂಗಳವಾದ್ಯಗಳೊಂದಿಗೆ ಭ|| ಮಹಾವೀರ ತೀರ್ಥಂಕರರ ಪಲ್ಲಕ್ಕಿ ಉತ್ಸವವು ಕ್ಷೇತ್ರದ ಭೋಗಾರ ಬಸದಿಯಿಂದ ರಥಬೀದಿಯ ಮೂಲಕ ಶ್ರೀಮಠಕ್ಕೆ ಮೆರವಣಿಗೆ ಬಂದು ತಲುಪಿತು. ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಶ್ರೀಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹಾಗೂ ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *