ಬಿಸಿಲ ಬೇಗೆಗೆ ತತ್ತರಿಸಿದ ಮಲೆನಾಡಿನ ಜನತೆ : ಬತ್ತಿದ ಬಾವಿಗಳು – ಕುಡಿಯುವ ನೀರಿಗೆ ಹಾಹಾಕಾರ
ರಿಪ್ಪನ್‌ಪೇಟೆ;-ನಡು ಮಲೆನಾಡಿನ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜೀವನಾಡಿಯಾಗಿರುವ ಶರಾವತಿ ಕುಮದ್ವತಿ ಶರ್ಮಿನಾವತಿ ನದಿಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದ್ದು ಈಗ ಬೇಸಿಗೆಯಲ್ಲಿ ಸಂಪೂರ್ಣವಾಗಿ ಬತ್ತಿ ಹೋಗಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದ್ದು ಆಡಿಕೆ ತೋಟಗಳು ಸಹ ಒಣಗಿ ಹೋಗುತ್ತಿದ್ದು ಜನರು ತತ್ತರಿಸಿ ಹೋಗಿದ್ದಾರೆ.
ನಡು ಮಲೆನಾಡಿನಲ್ಲಿ ಬೇಸಿಗೆ ಬಿಸಿಲ ತಾಪಮಾನ 37-40 ಡಿಗ್ರಿಯಷ್ಟು ಬಿಸಿಲಿನ ಝಳಕ್ಕೆ ರೈತ ನಾಗರೀಕರು ತತ್ತರಿಸಿದ್ದಾರೆ.ಕುಡಿಯಲು ನೀರಿಲ್ಲದೆ ಪರಿತಪ್ಪಿಸುವಂತಹ ಸ್ಥಿತಿಯಲ್ಲಿ ರೈತರು ತಮ್ಮ ಆಡಿಕೆ ತೋಟವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ತಾಲ್ಲೂಕಿನ ರಿಪ್ಪನ್‌ಪೇಟೆ ಬಾಳೂರು ಕೆಂಚನಾಲ ಆರಸಾಳು ಬೆಳ್ಳೂರು ಹೆದ್ದಾರಿಪುರ ಅಮೃತ ಹುಂಚಾ ಕೋಡೂರು ಸೊನಲೆ ಹರತಾಳು ಇನ್ನಿತರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ನಾಗರೀಕರು ಪರದಾಡುವ ಸ್ಥಿತಿ ಹೇಳದಂತಾಗಿದೆ.
ಇತ್ತೀಚೆಗೆ ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಚಂದಾಳದಿಂಬ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿಯಲ್ಲಿ ಪಂಚಾಯ್ತಿಗೆ ಸಾರ್ವಜನಿಕರು ಮನವಿ ಮಾಡಿಕೊಂಡ ಪರಿಣಾಮ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು ಕಲುಷಿತ ನೀರು ಸರಬರಾಜಿನಿಂದಾಗಿ ಪ್ರತಿಭಟನೆ ಸಹ ನಡೆದಿರುವ ಬೆನ್ನಲೇ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬರುವೆ ಗವಟೂರು ವಿನಾಯಕನಗರ ಬನ್ನಿನಗರ, ಶಬರೀಶ್‌ನಗರ, ನೆಹರು ಬಡಾವಣೆ, ಶ್ರೀರಾಮನಗರ ಭಾಗಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದ್ದಿದೆ.
ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬುಕ್ಕಿವರೆ ದೋಬೈಲು ಕಳಸೆ ನರ‍್ಲಿಗೆ ತಳಲೆ ಹಾರಂಬಳ್ಳಿ ಕಲ್ಲೂರು ಕಣಬಂದೂರು ಮೂಗುಡ್ತಿ ಇನ್ನಿತರ ಕಡೆಯಲ್ಲಿ ಕುಡಿಯುವ ನೀರಿನ ತೆರೆದ ಬಾವಿಗಳು ತಳಕಾಣುವಂತಾಗಿದ್ದು ಬೋರ್‌ವೆಲ್‌ಗಳಲ್ಲಿ ಸಹ ಅಂತರ್ಜಲ ಇಲ್ಲದೆ ನೀರಿಗಾಗಿ ರೈತರು ಪರಿತಪ್ಪಿಸುತ್ತಿದ್ದು ಆಡಿಕೆ ತೋಟಕ್ಕೆ ನೀರು ಇಲ್ಲದೆ ಮರಗಳು ಒಣಗುತ್ತಿವೆ.