5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಬೋರ್ಡ್ ಪರೀಕ್ಷೆ ನಡೆಸುವ ಸುತ್ತೋಲೆ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ಪರೀಕ್ಷೆ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದ್ದು ‘ಪಠ್ಯ ಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ, ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ’ ಎಂದು ನಿರ್ದೇಶನ ನೀಡಿದೆ.
ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ ಮಾರ್ಚ್ 10ರಂದು ಪುರಸ್ಕರಿಸಿ, ಬೋರ್ಡ್ ಪರೀಕ್ಷೆ ನಡೆಸುವ ಆದೇಶವನ್ನು ರದ್ದುಗೊಳಿಸಿತ್ತು. ಆದರೆ ಸರ್ಕಾರ ಏಕಸದಸ್ಯ ಪೀಠ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು.