ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸಲು ಹೊರಟರೆ ರಕ್ತ ಕ್ರಾಂತಿಯಾಗುತ್ತದೆ : ಸದನದಲ್ಲಿ ಗುಡುಗಿದ ಶಾಸಕ ಹರತಾಳು ಹಾಲಪ್ಪ|halappa

ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸಲು ಹೊರಟರೆ ರಕ್ತ ಕ್ರಾಂತಿಯಾಗುತ್ತದೆ ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಸದನದಲ್ಲಿ ಗುಡುಗಿದ್ದಾರೆ.




ಅಧಿವೇಶನದಲ್ಲಿ ಮಾತನಾಡುತ್ತಾ ಶರಾವತಿ ಮುಳುಗಡೆ ಸಂತ್ರಸ್ಥರನ್ನು ತೆರವುಗೊಳಿಸಲು ಹೊರಟರೆ ರಕ್ತಕ್ರಾಂತಿಯೊಂದಿಗೆ ಸಾಮೂಹಿಕ ಆತ್ಮಹತ್ಯೆ ನಡೆಯುತ್ತದೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.


ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲು ಸರ್ಕಾರ ಸುಮಾರು 8 ಸಾವಿರ ಕುಟುಂಬಗಳನ್ನು ರಾತ್ರೋರಾತ್ರಿ ಎಬ್ಬಿಸಿ, ಬೇರೆ ಬೇರೆ ಕಡೆಗಳಲ್ಲಿ ತಂದು ಬಿಟ್ಟಿತು. ಈಗಲೂ ಇವರ ಹೆಸರಿಗೆ ಭೂಮಿ ಆಗಿಲ್ಲ. ನಿರಾಶ್ರಿತರ ಹೆಸರಿಗೆ ಭೂಮಿ ಮಾಡಿಕೊಡುವುದರ ಜತೆಗೆ ಇವರ ಸ್ಥಿತಿಗತಿಯ ಅಧ್ಯಯನವೂ ಆಗಬೇಕು ಎಂದು ಬಿಜೆಪಿಯ ಹರತಾಳು ಹಾಲಪ್ಪ ಒತ್ತಾಯಿಸಿದರು.

ಅಲ್ಲದೆ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ನಿಯಮ ಸರಳೀಕರಿಸಿ ಮೂರು ತಲೆಮಾರು ಎಂದು ಇರುವುದನ್ನು ಕೈಬಿಟ್ಟು ಒಂದು ತಲೆಮಾರು ಎಂದು ಮಾಡಬೇಕು. ಈ ಕುರಿತು ಸದನವು ಒಮ್ಮತದ ನಿರ್ಣಯ ತೆಗೆದುಕೊಳ್ಳಬೇಕು. ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಅವರು ಎಚ್ಚರಿಸಿದರು.

ವಿಧಾನಸಭೆಯಲ್ಲಿ ಬುಧವಾರ ನಿಯಮ 69 ರಡಿ ಹರತಾಳು ಹಾಲಪ್ಪ ಮತ್ತು ದಿನಕರ ಶೆಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ‘ಶರಾವತಿ ಸಂತ್ರಸ್ತರ ವಿಚಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಒಯ್ದು ಇತ್ಯರ್ಥಪಡಿಸುತ್ತೇವೆ. ಈ ವಿಚಾರವನ್ನು ನಮಗೆ ಬಿಡಿ’ ಎಂದು ಹೇಳಿದರು.

ಈ ಪ್ರಕರಣಗಳಲ್ಲಿ ಒತ್ತುವರಿದಾರರಿಗೆ ಸರ್ಕಾರ ನೋಟಿಸ್‌ ಜಾರಿ ಮಾಡಿರುವುದರ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸಲಾಗುತ್ತಿದೆ. ಈ ನೋಟಿಸ್‌ ಒಕ್ಕಲೆಬ್ಬಿಸಲು ಅಲ್ಲ. ಅಲ್ಲಿ ವಾಸವಿರುವುದಕ್ಕೆ ದಾಖಲೆಗಳ ಪರಾಮರ್ಶೆಗೆ ಮಾತ್ರ. ಈ ರೀತಿ ಸಂಗ್ರಹಿಸಿದ ದಾಖಲೆಗಳು ವಿಭಾಗೀಯ ಅಧಿಕಾರಿಗೆ ಹೋಗುತ್ತದೆ. ಈ ನೋಟಿಸಿನ ಬಗ್ಗೆ ಭಯ ಬೇಕಿಲ್ಲ. ಅಪ ಪ್ರಚಾರಗಳಿಗೆ ಕಿವಿಗೊಡಬೇಕಾಗಿಲ್ಲ ಎಂದರು.

1980ರ ಅರಣ್ಯ ಕಾಯ್ದೆ ಜಾರಿಗೆ ಬಂದ ಮೇಲೆ ರಾಜ್ಯ ಸರ್ಕಾರ ಕೇಂದ್ರದ ಮತ್ತು ಸುಪ್ರೀಂಕೋರ್ಟ್‌ ಒಪ್ಪಿಗೆ ಪಡೆಯದೇ ಜಮೀನು ಡಿ-ನೋಟಿಫೈ ಮಾಡಿದ್ದನ್ನು ಹೈಕೋರ್ಟ್‌ ಒಪ್ಪಿಕೊಂಡಿಲ್ಲ. ಇದು ನ್ಯಾಯಾಂಗ ಉಲ್ಲಂಘನೆ ಆಗುವುದರಿಂದ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಮಾಧುಸ್ವಾಮಿ ವಿವರಿಸಿದರು.

Leave a Reply

Your email address will not be published. Required fields are marked *