ರಿಪ್ಪನ್ಪೇಟೆ: ನಾಡು-ನುಡಿಯ ಅಭಿವೃದ್ಧಿಗಾಗಿ ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು ಹಾಗೇಯೇ ವಿಶಾಲ ಭಾವನೆಯನ್ನು ಹೊಂದುವ ಜನಸಮೂಹ ಭಾಷಾ ಪ್ರೇಮದಿಂದ ನಾಡನ್ನು ಕಟ್ಟಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ, ಪುನಿತ್ ರಾಜ್ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ 67 ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನಿತ್ ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರಪಂಚದಲ್ಲಿಯೇ ಇಸ್ರೇಲ್ನ ಜನರು ಹೆಚ್ಚು ಭಾಷಾಭಿಮಾನಿಗಳಾಗಿದ್ದು, ಅವರ ನಿರಂತರ ಚಟುವಟಿಕೆಯಲ್ಲಿ ತಮ್ಮ ಭಾಷೆಯನ್ನೇ ಬಳಸುತ್ತ ಹಲವು ರಾಷ್ಟಗಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ. ಸಂಕುಚಿತತೆಯನ್ನು ಹೊಂದದೆ ಸರ್ವರಲ್ಲಿಯೂ ಬೆರೆತು ತಮ್ಮ ಭಾಷೆಯನ್ನು ಉಳಿಸಿದ್ದಾರೆ. ಅಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಸಹ ಜನತೆ ಆತ್ಮಾವಲೋಕನ ಮಾಡಿಕೊಂಡು ಭಾಷೆಯನ್ನು ಬೆಳೆಸಬೇಕಾದ ಅಗತ್ಯವಿದೆ.
ನಾವೆಲ್ಲರು ನವೆಂಬರ್ ಕನ್ನಡಿಗರಾಗಬಾರದು ಜೀವನಪೂರ್ತಿ ಕನ್ನಡವಾಗಬೇಕು. ಕನ್ನಡ ನಾಡನ್ನು ಆರ್ಥಿಕವಾಗಿ ಸಬಲವಾಗಿ ಕಟ್ಟಿದರೆ ವಿಶ್ವ ನಮ್ಮ ಕಡೆನೋಡುತ್ತದೆ. ನಮ್ಮ ದೇಶವನ್ನು ನೂರಾರು ವರ್ಷಗಳ ಕಾಲ ಆಳಿಹೋದ ಬ್ರಿಟೀಷರ ಭಾಷೆಗೆ ಇಂದಿಗೂ ನಾವು ದಾಸರಾಗಿದ್ದೇವೆ. ಮಾತೃಭಾಷೆಯಲ್ಲಿಯೇ ಎಲ್ಲವನ್ನು ಕಲಿತಾಗ ಕನ್ನಡ ಭಾಷೆ ವಿಪುಲವಾಗಿ ಬೆಳೆಯುತ್ತದೆ.
75% ಕನ್ನಡಿಗರಿಗೆ ಆದ್ಯತೆ: ಕರ್ನಾಟಕದಲ್ಲಿ ಸ್ಥಾಪಿತವಾದ ಹಲವಾರು ಉದ್ಯಮಗಳಲ್ಲಿ ಬೇರೆರಾಜ್ಯದ ನೌಕರರನ್ನೇ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಇಂದಿನದ್ದಲ್ಲ. ಯಾವ ಉದ್ಯಮಿಯೇ ನಮ್ಮ ರಾಜ್ಯದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿದರೆ ಕನ್ನಡಿಗರಿಗೆ 75% ಉದ್ಯೋಗ ನೀಡಬೇಕೆಂಬುದು ನಮ್ಮ ಬಯಕೆಯೂ ಆಗಿದ್ದು, ಅದರ ಈಡೇರಿಕೆಗೆ ಶ್ರಮಿಸುತ್ತಿದ್ದೇವೆ ಎಂದರು.
ಪುನಿತ್ ರಾಜ್ಕುಮಾರ್ ಒಬ್ಬ ಕೇವಲ ನಟರಲ್ಲ ಅದ್ಭುತ ವ್ಯಕ್ತ. ಅವರ ಆದರ್ಶಗಳು ಯುವಕರು ಅನುಸರಿಸಬೇಕು ಎಲ್ಲಿಯೂ ಪ್ರಚಾರವನ್ನು ಬಯಸದೆ ತನ್ನ ಕಾರ್ಯದಲ್ಲಿ ತಾನು ತೊಡಗಿಕೊಂಡು ಸಮಾಜ ಸೇವೆ ಮಾಡಿರುವ ಫಲವಾಗಿ ಅವರು ನಮ್ಮನ್ನಗಲಿದರೂ ಎಲ್ಲರ ಮನಸ್ಸಿನಲ್ಲಿದ್ದಾರೆ. ಅವರ ಕಾರ್ಯತತ್ಪರತೆಯನ್ನು ಗಮನಿಸಿರುವ ರಾಜ್ಯ ಸರ್ಕಾರ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿರುವುದು ರಾಜ್ಯದ ಹೆಮ್ಮೆಯ ಸಂಗತಿ ಎಂದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ ರಾಷ್ಟ ಪ್ರೇಮದ ವಿಷಯದಲ್ಲಿ ಕನ್ನಡಿಗರು ಎಂದಿಗೂ ಮುಂಚೂಣಿಯಲ್ಲಿರುತ್ತಾರೆ. ಸ್ವತಂತ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ಘರ್ ತಿರಂಗ ಅಭಿಯಾನವನ್ನು ಮಾಡಿ ರಾಜ್ಯದ ಪ್ರತಿಯೊಂದು ಮನೆಯಲ್ಲಿಯೂ ರಾಷ್ಟಧ್ವಜವನ್ನು ಹಾರಿಸಿದ್ದರು. ಅಂತೆಯೇ ರಾಜ್ಯ ಸರ್ಕಾರದ ರಾಜ್ಯೋತ್ಸವ ಸಂದರ್ಭದಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನಾಡಿನ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸುವುದರೊಂದಿಗೆ ಪೋಷಿಸಿ ಬೆಳೆಸಬೇಕು ಆದಾಗ ಮಾತ್ರ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಅರ್ಥಬರುತ್ತದೆ ಎಂದರು.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಬೇಕು ಆಗ ಸರ್ವರಿಗೂ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ. ದೆಹಲಿ ರಾಜಕಾರಣಿಗಳು ಇದರ ಬಗ್ಗೆ ಆಸಕ್ತಿ ವಹಿಸಿ ಒಂದಷ್ಟು ಅಭಿವೃದ್ಧಿಯನ್ನು ಸಾಧಿಸಿರುವುದು ಗಮನಾರ್ಹವಾಗಿದೆ. ಅಂತೆಯೇ ನಮ್ಮ ರಾಜ್ಯದಲ್ಲಿಯೂ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ರೂಪುಗೊಳಿಸಬೇಕು ಎಂದರು. ವ್ಯಕ್ತಿಗೆ ಆರೋಗ್ಯದ ಮೇಲೆ ಆಯುಷ್ಯ ನಿರ್ಧಾರವಾಗುತ್ತದೆ ಆದರೆ ಸಂಘಟನೆಗಳಿಗೆ ಅದರ ಕಾರ್ಯವೈಖರಿಯಿಂದ ಯಶಸ್ವು ಲಭಿಸುತ್ತದೆ. ರಿಪ್ಪನ್ಪೇಟೆಯ ಕನ್ನಡ ಕಸ್ತೂರಿ ಸಂಘ, ಪುನಿತ್ ರಾಜ್ ಅಭಿಮಾನಿ ಬಳಗದ ಕಾರ್ಯಕರ್ತರು ಕನ್ನಡ ನಾಡುನುಡಿಗಿನ ಬಗೆಗೆ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮ ರಾಜ್ಯದಲ್ಲಿಯೇ ಒಂದು ಆದರ್ಶಪ್ರಾಯವಾಗಿದೆ ಎಂದು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕೆಂಚನಾಲ ಡಾ. ಆರ್. ಗಣೇಶ್, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮೆಣಸೆ ಆನಂದ ಅಧ್ಯಕ್ಷತೆ ವಹಿಸಿದ್ದು, ಗ್ರಾ.ಪಂ. ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಮಹಾಲಕ್ಷಿö, ಮುಖಂಡರಾದ ಲಕ್ಷö್ಮಣಗೌಡ, ತಾರಾಮೂರ್ತಿ, ಪ್ರಶಾಂತ ಕೆ.ಜಿ., ಆರ್.ಎ. ಚಾಬುಸಾಬ್, ಎಂ.ಎಂ ಪರಮೇಶ, ಮಂಜುನಾಥ ಕಾಮತ್, ಸುರೇಶ ಸ್ವಾಮಿರಾವ್ ಜಾಗದ್ದೆ ಉಮೇಶ ಇನ್ನಿತರರಿದ್ದರು.
ಸಮಾರಂಭದಲ್ಲಿ ಝಿ ಕನ್ನಡದ ಸರಿಗಮಪ ಖ್ಯಾತಿಯ ಗಾಯಕ ಮೆಹಬೂಬ್ ಸಾಬ್, ಗಾನಸುಧೆಯನ್ನು ಹರಿಸಿದರು. ಕುಂದಾಪುರದ ರೂಪಕಲಾ ತಂಡದವರು ರಂಗಮಂಟಪ ಎಂಬ ಹಾಸ್ಯಮಯ ನಾಟಕವನ್ನು ಪ್ರದರ್ಶಿಸಿ ಸಾರ್ವಜನಿಕರನ್ನು ರಂಜಿಸಿದರು.