ಸಯ್ಯದ್ ಆಶ್ರಫ್ ಅವರ ಈ ಹೈಟೆಕ್ ಆಟೋ ರಸ್ತೆಗಿಳಿದರೆ ಥಟ್ ಅಂತಾ ಎಲ್ಲರ ಗಮನ ಸೆಳೆಯುತ್ತದೆ. ಆಟೋದ ಹಿಂಬದಿಯಲ್ಲಿ ಪ್ರತಿ ಕಡೆಗಳಲ್ಲಿ ಮೂರು ಚಕ್ರಗಳನ್ನು ಅಳವಡಿಸಲಾಗಿದೆ. ಆಟೋಗೆ ವಿಭಿನ್ನವಾದ ಮಡ್ ಗಾರ್ಡ್ ಕೂಡ ಹಾಕಿಸಿದ್ದಾರೆ. ಉಳಿದ ಆಟೋಗಳ ಹಾಗೆ ಹಳದಿ ಅಥವಾ ಕಪ್ಪು ಟಾಪ್ ಬದಲು, ಹುಲಿ ಚರ್ಮದ ಮಾದರಿ ಹೋಲುವ ಟಾಪ್ ಹಾಕಲಾಗಿದೆ.
ಈ ಹೈಟೆಕ್ ಆಟೋದಲ್ಲಿ ಸಯ್ಯದ್ ಆಶ್ರಫ್, ಹಿಂಬದಿ ಇಂಜಿನ್‌ಗೆ ಸ್ಟೀಲ್ ಕೋಟ್ ಮಾಡಿಸಿದ್ದಾರೆ. ಅದರ ಬಾಗಿಲಿಗೆ ಗಾಜು, ಸುತ್ತಲು ಸ್ಟೀಲ್ ಹಾಕಿಸಲಾಗಿದೆ. ಇನ್ನು, ಒಳ ಭಾಗದಲ್ಲಿ ಚಾಲಕನ ಸೀಟಿನ ಹಿಂಬದಿ ಸ್ಟೀಲ್ ಬಳಸಿ ತಾಜ್ ಮಹಲ್ ಮಾದರಿಯನ್ನು ಅಳವಡಿಸಲಾಗಿದೆ. ಆಟೋದ ಹ್ಯಾಂಡಲ್, ಬ್ರೇಕ್ ಲಿವರ್ ಕೂಡ ಸ್ಟೀಲ್‌ನಿಂದಲೇ ಮಾಡಿಸಲಾಗಿದೆ. ಒಳ ಭಾಗದಲ್ಲಿ ಮ್ಯೂಸಿಕ್ ಸಿಸ್ಟಮ್, ಅದ್ಧೂರಿ ಅನಿಸುವ ಇಂಟೀರಿಯರ್ ಲೈಟಿಂಗ್‌ಗಳನ್ನು ಹಾಕಿಸಿದ್ದಾರೆ. ಈ ಆಟೋಗಾಗಿ ಸಯ್ಯದ್ ಅಶ್ರಫ್ 13 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಈ ಹೈಟೆಕ್ ಆಟೋವನ್ನು ಸಯ್ಯದ್ ಅಶ್ರಫ್ ನಿತ್ಯ ಬಾಡಿಗೆಗೆ ಬಳಸುವುದಿಲ್ಲ. ಈದ್ ಮಿಲಾದ್ ಮೆರವಣಿಗೆ, ಕೆಲವು ಕಾರ್ಯಕ್ರಮಗಳಿಗೆ ಮಾತ್ರ ಆಟೋವನ್ನು ಹೊರಗೆ ತೆಗೆಯುತ್ತಾರೆ. ಇಲ್ಲವಾದಲ್ಲಿ ಈ ಆಟೋ ಮನೆಯಲ್ಲಿಯೇ ಇರುತ್ತದೆ. ಜೀವನ ನಿರ್ವಹಣೆಗಾಗಿ ಸಯ್ಯದ್ ಅಶ್ರಫ್ ಅವರ ತಾಯಿ ಅವರಿಗೊಂದು ಆಟೋ ಕೊಡಿಸಿದ್ದರು. ಆ ಬಳಿಕ ಸಯ್ಯದ್ ಅಶ್ರಫ್ ಅವರು ದುಡಿದು ಮತ್ತೊಂದು ಆಟೋ ಖರೀದಿಸಿದರು. ಜೊತೆಗೆ ವಾಹನಗಳ ಖರೀದಿ, ಮಾರಾಟ ವ್ಯವಹಾರವನ್ನು ಆರಂಭಿಸಿದರು. ಆದರೆ ತಾಯಿ ಕೊಡಿಸಿದ ಆಟೋದ ಮೇಲೆ ಮಮಕಾರ ಹೆಚ್ಚು. ಇದೆ ಕಾರಣಕ್ಕೆ ಅದಕ್ಕೆ ಹೊಸ ರೂಪ ನೀಡಬೇಕು ಎಂದು ನಿರ್ಧರಿಸಿದರು.
ತಮ್ಮ ಆಟೋದ ಬಗ್ಗೆ ಮಾತನಾಡಿರುವ ಸಯ್ಯದ್ ಅಶ್ರಫ್, “ಅಮ್ಮ ಕೊಡಿಸಿದ ಆಟೋ ಎನ್ನುವ ಕಾರಣಕ್ಕೆ ಅದನ್ನು ಹೀಗೆ ರೆಡಿ ಮಾಡಿಸಿದೆ. ಇದನ್ನು ಕಂಡು ಅಮ್ಮ ತುಂಬಾ ಖುಷಿ ಪಟ್ಟರು. ಈಗಲೂ ಒಂದು ಬಾರಿ ಆಟೋ ಹೊರಗೆ ಹೋಗಿ ಬಂದರೆ, ಅಮ್ಮ ದೃಷ್ಟಿ ತೆಗೆಯುತ್ತಾರೆ. ಆಟೋ ಸಿದ್ಧವಾದ ಮೇಲೆ ಅಮ್ಮನನ್ನೇ ಮೊದಲು ಕೂರಿಸಿಕೊಂಡು ಹೋಗಿದ್ದೆ. ನಮ್ಮ ಬಡಾವಣೆಯಲ್ಲಿ ಸುತ್ತಿಸಿದ್ದೆ. ಅಮ್ಮ 501 ರೂಪಾಯಿ ಬಾಡಿಗೆ ಹಣ ಕೊಟ್ಟಿದ್ದರು. ಅದೊಂದೇ ಬಾಡಿಗೆ ಹಣವನ್ನು ನಾನು ಈ ತನಕ ಪಡೆದಿರುವುದು. ಮತ್ತಿನ್ಯಾರಿಗೂ ಬಾಡಿಗೆ ಹೋಗಿಲ್ಲ,” ಎಂದಿದ್ದಾರೆ.
ತಾಯಿ ಕೊಡಿಸಿದ ಆಟೋ ಎಂಬ ಪ್ರೀತಿಗಾಗಿ ಸಯ್ಯದ್ ಅಶ್ರಫ್ ಆಟೋವನ್ನು ಹೈಟೆಕ್ ಮಾಡಿಸಿದ್ದಾರೆ. ಕಳೆದ ವರ್ಷದ ನವೆಂಬರ್ 1ರಂದು ಈ ಹೈಟೆಕ್ ಆಟೋ ಮೊದಲು ರಸ್ತೆಗಿಳಿದಿದ್ದು. ಆಗ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಹರೀಶ್ ಪಟೇಲ್ ಅವರು ಆಟೋವನ್ನು ಉದ್ಘಾಟಿಸಿದ್ದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೂಡ ಆಟೋವನ್ನು ಕಂಡು ಖುಷಿ ಪಟ್ಟಿದ್ದಾರೆ ಎಂದು ಸಯ್ಯದ್ ಅಶ್ರಫ್ ಹೇಳಿದ್ದಾರೆ. ಆಟೋವನ್ನು ಹೈಟೆಕ್ ಮಾಡಿದ ಸಯ್ಯದ್ ಅಶ್ರಫ್ ಉಳಿದ ಚಾಲಕರ ಕಣ್ಣಲ್ಲಿ ಸೆಲೆಬ್ರಿಟಿ ಆಟೋ ಮಾಲೀಕರಾಗಿದ್ದಾರೆ. ಇವರ ಆಟೋದ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಿಲ್ಲೆ, ಹೊರ ಜಿಲ್ಲೆ, ವಿವಿಧ ರಾಜ್ಯಗಳು, ವಿದೇಶದಿಂದೆಲ್ಲ ವಿಡಿಯೋ ಕಾಲ್ ಮಾಡಿ ಆಟೋವನ್ನು ತೋರಿಸುವಂತೆ ಆಶ್ರಫ್ ಅವರನ್ನು ಜನ ಕೇಳುತ್ತಾರಂತೆ. ಮೊನ್ನೆಯ ಈದ್ ಮಿಲಾದ್ ಮೆರವಣಿಗೆ ಬಳಿಕ ಸಯ್ಯದ್ ಅಶ್ರಫ್ ಅವರ 7 ಚಕ್ರದ ಆಟೋ ಪುನಃ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.