ರಿಪ್ಪನ್ ಪೇಟೆ; ವಿಶ್ವಕರ್ಮ ಜನಾಂಗವು ಸೃಷ್ಟಿಯ ಪ್ರತಿನಿಧಿಯಾಗಿ ದೇವಶಿಲ್ಪಿ ಎಂದು ಕರೆಸಿ ಕೊಳ್ಳುವ ಮೂಲಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿ ತಮ್ಮದೇ ಆದ ವೃತ್ತಿಯನ್ನು ಅವಲಂಬಿಸಿ ರುವುದು ಶ್ಲಾಘನೀಯ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕನ್ನಡ ಉಪನ್ಯಾಸಕ ಶ್ರೀಪತಿ ಹಳಗುಂದ ಅಭಿಪ್ರಾಯಪಟ್ಟರು .
ಕೆರೆಹಳ್ಳಿ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ಶನಿವಾರ ರಾಮಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಮ್ಮಾರ. ಅಕ್ಕಸಾಲಿಗ, ಬಡಿಗ, ಎರಕ ಸೇರಿದಂತೆ ಪಂಚಲೋಹಗಳ ಮೂಲಕವೇ ಬಗೆ ಬಗೆಯ ವಸ್ತುಗಳನ್ನು ತಯಾರಿಸಿ ವಿಶ್ವಕರ್ಮರು ಶ್ರಮ ಸಂಸ್ಕೃತಿ ಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು .
ಕರ್ಮ ಎಂದರೆ ಪರೋಪಕಾರದ ಹಿನ್ನೆಲೆಯಲ್ಲಿ ಹುಟ್ಟಿದ ಧರ್ಮ, ಪರಹಿತವೇ ಹರ ಹಿತವೆಂದು ತಿಳಿದ ಜನಾಂಗ ಇದಾಗಿದೆ.ಕಲೆ,ಜಾನಪದ, ಶ್ರಮ,ಕೆತ್ತನೆ, ಆಚಾರ ವಿಚಾರ, ಗುಡಿ ಕೈಗಾರಿಕೆಗಳು ಇವುಗಳ ಮೂಲಕವೇ ಈ ನೆಲದ ಸಂಸ್ಕೃತಿ ಯನ್ನು ಜಗತ್ತಿಗೆ ಪರಿಚಯಿಸಿದವರು.
ಹದಿನಾರನೇ ಶತಮಾನದ ಕ್ರಾಂತಿ ಕವಿ ಸರ್ವಜ್ಞ ಕಂಚಿನ ಫಲ ಲೇಸು
ಮುಗಿಲಿಗೆ ಮಿಂಚು ಲೇಸು ಕೆಂಚಾನ ಹೆಣ್ಣು ಲೇಸು
ಊರಿಗೊಬ್ಬ ಪಂಚಾಳ ಲೇಸು ಎಂದು ಪಂಚ ಲೋಹದ ಮೂಲಕವೇ ದೇವರಿಗೆ,ರೈತರಿಗೆ, ಸಾಮಾನ್ಯನಿಂದ ,ಸೈನಿಕರವರೆಗೂ ಇವರುಗಳು ಮಾಡಿದ ಸಲಕರಣೆಗಳನ್ನು ಬಳಸುತ್ತೇವೆ.ಮನೆಗಳಲ್ಲಿ ಮನಗಳಲ್ಲಿ… ಇವರ ಸಾಧನಗಳು ಇದೆ..ಜಗತ್ತಿನ ಸೃಷ್ಟಿಕರ್ತರಿಗೆ ಜನಬೆಂಬಲ ಬೇಕಾಗಿದೆ ಆ ಮೂಲಕ ಈ ಜನಾಂಗಕ್ಕೆ ಗೌರವವನ್ನು ನೀಡಬೇಕಾಗಿದೆ ಎಂದರು.
ಶಿವನ ಭಕ್ತರು ಶೈವರು, ವಿಷ್ಣುವಿನ ಭಕ್ತರು ವೈಷ್ಣವರು, ಹಾಗೆಯೇ ವಿಶ್ವಕರ್ಮ ರ ಭಕ್ತರು ಇವರಾಗಿದ್ದಾರೆ,ಸ್ವರ್ಗ, ಲಂಕಾ ಪಟ್ಟಣ, ಇಂದ್ರಪ್ರಸ್ಥ, ಅಜಂತಾ, ಎಲ್ಲೋರ, ಸೇರಿದಂತೆ ನಾಡಿನಾದ್ಯಾಂತ ಈ ಜನಾಂಗದ ಪ್ರತಿಭೆ ಅನಾವರಣಗೊಂಡಿದೆ . ಯಾವ ವಿಶ್ವವಿದ್ಯಾಲಯದಿಂದಲೂ ವಿಶೇಷ ಶಿಕ್ಷಣ ಪಡೆಯದ ಇವರು ಕಲೆಯನ್ನೇ ಬದುಕಾಗಿಸಿಕೊಂಡಿದ್ದಾರೆ ಎಂದರು.
ಕೆರೆಹಳ್ಳಿ ಹೋಬಳಿ ವಿಶ್ವಕರ್ಮ ಸಂಘದ ಅಧ್ಯಕ್ಷ ಆರ್. ಹೆಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಪ್ರತಿಭಾ ಪುರಸ್ಕಾರ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ನರಸಿಂಹ ಆಚಾರ್ , ರಾಮು ಆಚಾರ್ , ನೆವಟೂರು ಚಂದ್ರ ಆಚಾರ್ , ಗ್ರಾಪಂ ಸದಸ್ಯ ಶ್ರೀನಿವಾಸ್ ನೆವಟೂರು , ಭಾಸ್ಕರ್ ಆಚಾರ್ ಮತ್ತು ಪ್ರಭಾಕರ್ ಆಚಾರ್ ಸೇರಿದಂತೆ ಇನ್ನಿತರರಿದ್ದರು.