ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಹಾಲುಗುಡ್ಡೆ ಗ್ರಾಮದ ಕ್ಯಾಂಪ್ ನಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಾಲುಗುಡ್ಡೆ ಕ್ಯಾಂಪ್ ನಲ್ಲಿ ಅನುಷಾ (19) ಎಂಬ ಯುವತಿ ನಿನ್ನೆ ಮನೆಯಲ್ಲಿದ್ದಾಗ ಕೀಟನಾಶಕ ಕುಡಿದು ತನ್ನ ಪ್ರಿಯಕರನಿಗೆ ಕರೆ ಮಾಡಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾಳೆ.ಕೂಡಲೇ ಪ್ರಿಯಕರ ಮಂಜುನಾಥ್ ಓಡಿ ಬಂದು ಯುವತಿಯನ್ನ ಆನಂದಪುರ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಆನಂದಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು ನಂತರ ಹೆಚ್ಚಿನ ಚಿಕಿತ್ಸೆಗೆ ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಗೆ ದಾಖಲಿಸಲಾಗಿದೆ.
ಮೆಗ್ಗಾನ್ ನಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅನುಷಾ ಅಸುನೀಗಿದ್ದಾಳೆ. ಅನುಷ (18) ಕೂಲಿ ಕೆಲಸ ಮಾಡಿಕೊಂಡಿದ್ದು, 8 ನೇ ತರಗತಿ ಓದಿಕೊಂಡಿದ್ದಾಳೆ. ನೆವಟೂರು ಗ್ರಾಮದ ಮಂಜುನಾಥ್ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು.
ಮೂರು ತಿಂಗಳ ಹಿಂದೆ ಹುಡುಗಿ ಅಣ್ಣನ ಮನೆಗೆ ಗಾರೆಕೆಲಸಕ್ಕೆ ಹೋಗಿದ್ದ ಮಂಜುನಾಥ್ ನಿಗೆ ಅನುಷಾ ಪರಿಚಯವಾಗಿದ್ದಾಳೆ. ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರು ಫೋನ್ ನಂಬರ್ ಪಡೆದುಕೊಂಡಿದ್ದ ಜೋಡಿಹಕ್ಕಿಗಳು ಮದುವೆಯ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ.
ಮೊಬೈಲ್ ನಲ್ಲಿಯೇ ಜೋರು ಜೋರು ಮಾತನಾಡುತ್ತಿದ್ದ ಯುವತಿ ಹುಡುಗ ಮದುವೆ ವಿಚಾರದಲ್ಲಿ ಒಪ್ಪಿಕೊಳ್ಳದ ಕಾರಣ ಯುವತಿ ವಿಷ ಸೇವಿಸಿರುವುದಾಗಿ ತಂದೆ ಬಂಗಾರಪ್ಪ ದೂರು ದಾಖಲಿಸಿದ್ದಾರೆ.
ನಿನ್ನೆ ಯುವತಿಯನ್ನ ಮೆಗ್ಗಾನ್ ಗೆ ದಾಖಲಿಸುವವರೆಗೂ ಜೊತೆಗೆ ಇದ್ದ ಯುವಕ ಇಂದು ಬೆಳಿಗ್ಗೆ 7 ಗಂಟೆಗೆ ಯುವತಿ ಪ್ರಾಣ ಬಿಟ್ಟಾಗಿನಿಂದ ನಾಪತ್ತೆಯಾಗಿದ್ದಾನೆ.
ಮದುವೆಯಾಗಲು ಒಪ್ಪದ ಯುವಕನ ಕಿರುಕುಳದಿಂದ ಬೇಸತ್ತು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ.