2019ರಲ್ಲಿಯೇ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ನನ್ನ ಕೃಷಿ ಜಮೀನಿಗೆ ತೆರಳುವ ದಾರಿಗೆ ಅಡ್ಡಲಾಗಿ ಗ್ರಾಮದ ಇನ್ನೋರ್ವ ಕೃಷಿಕ ರೇವಣಪ್ಪ ಗೌಡ ಹಾಗೂ ಅವರ ಕುಟುಂಬದವರು ಸರಕಾರಿ ಜಾಗದಲ್ಲಿ ಬೇಲಿ ನಿರ್ಮಾಣ ಮಾಡಿದ್ದಾರೆ. ಇದರಿಂದ ನನ್ನ ಕೃಷಿ ಜಮೀನಿಗೆ ಹೋಗಲು ರಸ್ತೆ ಇಲ್ಲದಂತಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಬೇಲಿ ತೆರವುಗೊಳಿಸಲು ಹಿಂದೆ ಆದೇಶ ಮಾಡಿದ್ದರು. ಆದರೆ ಇದುವರೆಗೂ ಬೇಲಿ ತೆರವುಗೊಳಿಸಿ, ದಾರಿಯನ್ನು ಖುಲ್ಲಾ ಗೊಳಿಸಿರುವುದಿಲ್ಲ.
ಅಲ್ಲದೇ ಇದೇ ಗ್ರಾಮದ ಸರಕಾರಿ ಜಾಗದಲ್ಲಿರುವ ಕೆರೆಯನ್ನು ಇದೇ ಆರೋಪಿಗಳು ಒತ್ತುವರಿ ಮಾಡಿದ್ದಾರೆ ಇದನ್ನು ಸಹಾ ತೆರವುಗೊಳಿಸಲು ಅಧಿಕಾರಿಗಳು ಆದೇಶ ಮಾಡಿದ ಬಳಿಕವೂ ತೆರವು ಕರ್ಯಾಚರಣೆ ನಡೆದಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದೇ ವಾಪಾಸಾಗಿದ್ದಾರೆ. ಅಧಿಕಾರಿ ವರ್ಗ ತೆರವುಗೊಳಿಸಲು ಮೀನಾ-ಮೇಷ ಎಣಿಸುತ್ತಿರುವುದರ ಹಿಂದೆ ಅನ್ಯ ಕಾರಣವಿದ್ದಂತೆ ಕಂಡು ಬರುತ್ತಿದೆ. ಪದೇ ಪದೇ ಮನವಿ ಮಾಡಿದರೂ ಉಪಯೋಗ ಆಗದ ಹಿನ್ನೆಲೆಯಲ್ಲಿ ತಾವು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನ್ಯಾಯ ದೊರಕುವವರೆಗೂ ಸ್ಥಳದಲ್ಲಿಯೇ ಪ್ರತಿಭಟನೆ ಮುಂದುವರೆಸುತ್ತೇನೆ ಎಂದರು.
ಇಂದು ಬೆಳಿಗ್ಗೆಯಿಂದ ತಾಲೂಕು ಕಛೇರಿ ಎದುರು ಕುಳಿತಿರುವ ದೇಶದ ಬೆನ್ನೆಲುಬಾದ ಯುವ ಕೃಷಿಕನ ಸಮಸ್ಯೆಯನ್ನು ಆಲಿಸಲು ಜಡ್ಡುಗಟ್ಟಿರುವ ಅಧಿಕಾರಿಗಳಿಗೆ ಸಮಯವಿಲ್ಲದೇ ಬೆಳಿಗ್ಗೆಯಿಂದ ಯಾವೊಬ್ಬ ಅಧಿಕಾರಿಯು ಹತ್ತಿರ ಸುಳಿದಿಲ್ಲ.