ತೀರ್ಥಹಳ್ಳಿ : ಇಲ್ಲಿ ಮಳೆಗಾಲ ಬಂತೆಂದರೆ ಸಾಕು ಜನರ ಪರದಾಟ ಆರಂಭವಾಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಬದುಕಲೂ ಕಷ್ಟ.. ಸತ್ತರೂ ಕಷ್ಟ. ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..! ಹೌದು, ಆಶ್ಚರ್ಯವಾದರೂ ಸತ್ಯ. ಇದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ಗ್ರಾಮವೊಂದರ ಪರಿಸ್ಥಿತಿ.
ತಾಲೂಕಿನ ಹೊಸಹಳ್ಳಿ ಗ್ರಾ.ಪಂಚಾಯತ್ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಮೃತ ಶರೀರವನ್ನು ಗ್ರಾಮಸ್ಥರು ನೀರು ತುಂಬಿದ ರಸ್ತೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ.
ಕೋಡ್ಲು ಗ್ರಾಮದ ತಮ್ಮಯ್ಯ ಗೌಡ ಅವರು ವಯೋ ಸಹಜವಾಗಿ ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯ ನಡೆಸಲು ಊರ ಗ್ರಾಮಸ್ಥರು ಶವ ಹೊತ್ತುಕೊಂಡು ಊರ ಸ್ಮಶಾನಕ್ಕೆ ತಂದಿದ್ದಾರೆ. ಆದರೆ ಗ್ರಾಮದಿಂದ ಸ್ಮಶಾನಕ್ಕೆ ಬರಲು ಸರಿಯಾದ ರಸ್ತೆಯಿಲ್ಲ. ಈ ರಸ್ತೆ ಸಾಮಾನ್ಯಕ್ಕಿಂತ ತಗ್ಗು ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ಮುಳುಗಡೆಯಾಗುತ್ತದೆ. ಸ್ಮಶಾನಕ್ಕೆ ಬರಬೇಕಾದರೆ ಎದೆ ಮಟ್ಟದವರೆಗಿನ ನೀರಿರುವ ರಸ್ತೆಯೇ ಅನಿವಾರ್ಯವಾಗುತ್ತದೆ.
ವರದಿ : ಅಕ್ಷಯ್ ಕುಮಾರ್