ಅಣೆ ಪ್ರಮಾಣದ ತಪ್ಪು ಕಾಣಿಕೆ ಸಲ್ಲಿಸಲು ಹಾಲಪ್ಪ ಧರ್ಮಸ್ಥಳಕ್ಕೆ ಭೇಟಿ : ಬೇಳೂರು ಅನುಮಾನ /// ಕೆಲವರಿಗೆ ಆಪಾದನೆ ಮಾಡುವುದೇ ಕೆಲಸ : ಹಾಲಪ್ಪ ತಿರುಗೇಟು

ಸಾಗರ: ಈಗ ಶಾಸಕ ಹಾಲಪ್ಪ ಅವರಿಗೆ ಜ್ಞಾನೋದಯ ಆಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದು ತಪ್ಪಾಗಿದೆ ಎಂಬ ಕಾರಣಕ್ಕೆ ಅವರು ತಪ್ಪುದಂಡ ಸಲ್ಲಿಸಲು ಅಲ್ಲಿಗೆ ಹೋಗಿರಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಂಕೆ ವ್ಯಕ್ತಪಡಿಸಿದರು.

ಇಲ್ಲಿನ ಮಲೆನಾಡು ಸಿರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವಿಪರೀತ ಮಳೆಯಿಂದ ಮನೆಗಳು ಕುಸಿದು ಹೋಗಿದೆ. ತೋಟದ ಮಣ್ಣು ಕೊಚ್ಚಿ ಹೋಗಿದ್ದರೆ ಗದ್ದೆಗಳ ಮೇಲೆ ನೆರೆಯಿಂದ ಮಣ್ಣು ತುಂಬಿಕೊಂಡಿದೆ. ರೈತರು ಎರಡು ಮೂರು ಬಾರಿ ನಾಟಿ ಮಾಡಿದ್ದು ತೇಲಿಹೋಗಿದೆ. ಈ ಹಂತದಲ್ಲಿ ರೈತರ ಜೊತೆ ಇರಬೇಕಾದ ಶಾಸಕರು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.


ಹೊಸನಗರ, ರಿಪ್ಪನ್‌ಪೇಟೆ, ಸಾಗರದಲ್ಲಿ ಧ್ವಜ ತಯಾರಿ ಸ್ಥಳಕ್ಕೆ ಹೋಗುವುದು, ಧ್ವಜ ತೋರಿಸುವುದು ಅವರ ಕಾಯಕವಾಗಿದೆ. ನನಗೆ ಮಾಹಿತಿಯಿರುವಂತೆ ಅವರು ಒಂದು ಕಡೆ ಮಾತ್ರ ನೆರೆಹಾನಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾನು ಶಾಸಕನಾಗಿದ್ದ ಕಾಲದಲ್ಲಿ ತ್ಯಾಗರ್ತಿಯ ಹೋಬಳಿಯೊಂದರಲ್ಲಿ ನೆರೆ ಹಾವಳಿ ಸಂಭವಿಸಿದಾಗ ವೈಯಕ್ತಿಕವಾಗಿ ಒಂದೇ ದಿನ ಐದು ಲಕ್ಷ ರೂ.ನ್ನು ಸಹಾಯಕ್ಕೆ ವಿನಿಯೋಗಿಸಿದ್ದೆ. ಅವರು ಕೈಯಿಂದಲಂತೂ ಕೊಡುವ ಜಾಯಮಾನದವರಲ್ಲ. ಸರ್ಕಾರದ ಪರಿಹಾರ ಮೊತ್ತಗಳನ್ನು ಕೊಡಿಸಲಿ ಎಂದು ವ್ಯಂಗ್ಯವಾಡಿದರು.


ಮನೆಮನೆ ಮೇಲೂ ರಾಷ್ಟ್ರಧ್ವಜ ಬಿಜೆಪಿ ಚುನಾವಣೆ ಗಿಮಿಕ್. ಹಾಗೇ ಹಾರಿಸುವುದಿದ್ದರೂ ಅಳತೆ ವ್ಯತ್ಯಾಸ, ಅಶೋಕ ಚಕ್ರದ ಸರಿಯಾದ ಚಿತ್ರಣ ಇಲ್ಲದ ಧ್ವಜಗಳನ್ನು ವಿತರಿಸುವುದನ್ನು ಒಪ್ಪಲಾಗದು. ಈಗಲೂ ಆಡಳಿತ ಯಂತ್ರವನ್ನು ಬಳಸಿಕೊಂಡು ತಾಲೂಕಿನಲ್ಲಿ ವಿವಿಧ ಇಲಾಖೆ ಆರ್ಥಿಕ ನೆರವಿನಿಂದ ೭೦ ಸಾವಿರ ಧ್ವಜ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿಯಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಬಿಜೆಪಿಯವರು ಪಾಲ್ಗೊಂಡಿಲ್ಲ. ತ್ಯಾಗ ಬಲಿದಾನ ಮಾಡಿಲ್ಲ. ಆ ವೇಳೆ ಇವರೆಲ್ಲ ಮನೆಯಲ್ಲಿ ಅಡಗಿ ಕುಳಿತಿದ್ದರು ಎಂದು ಚಾಟಿ ಬೀಸಿದರು. 


ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಕೇಸು ಅಮಾಯಕರ ಮೇಲೆ ಹಾಕಲು ಬಿಟ್ಟಿರಲಿಲ್ಲ. ಆದರೆ ತಾಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮದಲ್ಲಿ ರಸ್ತೆಗೆ ಬಿದ್ದಿದ್ದ ಮರವನ್ನು ಕಡಿದು ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಂಡ ೧೦ಕ್ಕೂ ಹೆಚ್ಚು ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ನಡೆಸಿರುವ ದೌರ್ಜನ್ಯ ಖಂಡನೀಯ. ಅಮಾಯಕರ ಕೈಗೆ ಸ್ಲೇಟ್ ಕೊಟ್ಟು ಫೋಟೋ ಹೊಡೆಸಿ, ಗಂಧ ಕಳ್ಳತನ ಮಾಡಿದವರಂತೆ ಬಿಂಬಿಸಿದ್ದು ಅಮಾನವೀಯವಾಗಿದೆ. ಈ ರೀತಿಯ ಕೃತ್ಯಗಳಿಂದ ಅಮಾಯಕರಿಗೆ ರಕ್ಷಣೆ ಕೊಡುವ ಶಕ್ತಿ ಈಗಿನ ಶಾಸಕರಿಗಿಲ್ಲ ಎಂದು ಹೇಳಿದರು. 

ತಾಲೂಕು ಕುಡುಕರ ಸಾಮ್ರಾಜ್ಯವಾಗಿದೆ. ಬೆಂಗಳೂರಿನಲ್ಲಿ ತಮ್ಮದೇ ಐದಾರು ಬಾರ್ ಹೊಂದಿರುವ, ತಾಲೂಕಿನ ಹಳ್ಳಿಗಳಲ್ಲೂ ಎಂಎಸ್‌ಐಎಲ್ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿರುವ ಶಾಸಕರು ವ್ಯಸನಮುಕ್ತ ಸಮಾಜ ನಿರ್ಮಾಣದ ಜಾಥಾದಲ್ಲಿ ಪಾಲ್ಗೊಂಡಿದ್ದು ಹಾಸ್ಯಾಸ್ಪದ ಸಂಗತಿ.

 ನಗರವ್ಯಾಪ್ತಿಯಲ್ಲಿ ಒತ್ತುವರಿ ತೆರವು ಹೆಸರಿನಲ್ಲಿ ಶಾಸಕ ಹಾಲಪ್ಪ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗಪ್ಪ ಮುಸ್ಲೀಂ ಸಮುದಾಯವನ್ನು ಟಾರ್ಗೆಟ್ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ದೂರಿದರು.


ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಮ್ಮದೇ ಕಾರ್ಯಕರ್ತರನ್ನು ರಕ್ಷಣೆ ಮಾಡಲು ವಿಫಲವಾಗಿದೆ. ಶಿವಮೊಗ್ಗದಲ್ಲಿ ನಡೆದ ಹಿಂದೂ ಹರ್ಷ ಹತ್ಯೆ, ಪುತ್ತೂರಿನಲ್ಲಿ ನಡೆದ ಪ್ರವೀಣ್ ನೆಟ್ಯಾರ್ ಹತ್ಯೆಯ ಹೊಣೆ ಹೊತ್ತು ಗೃಹ ಸಚಿವರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸ್ವಂತ ಮನೆ ಕಟ್ಟಿಸಿಕೊಡುವ ಜೊತೆಗೆ ಅವರ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡಿ ಎಂದು ಒತ್ತಾಯಿಸಿದರು.


ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ಯಶವಂತ ಪಣಿ, ತಾರಾಮೂರ್ತಿ, ದಿನೇಶ್ ಡಿ., ಅನ್ವರ್ ಭಾಷಾ, ಶ್ರೀನಾಥ್, ನಾರಾಯಣಪ್ಪ, ಸಂತೋಷ್ ಸದ್ಗುರು, ರವಿಕುಮಾರ್, ಶ್ರೀಧರ್ ಪಾಟೀಲ್, ಆನಂದ್ ಭೀಮನೇರಿ, ಕೃಷ್ಣಪ್ಪ ಹಾಜರಿದ್ದರು.

ಕೆಲವರಿಗೆ ಆಪಾದನೆ ಮಾಡುವುದೇ ಕೆಲಸ; ಹಾಲಪ್ಪ ತಿರುಗೇಟು


ಸಾಗರ: ಕೆಲವರು ಆಪಾದನೆ ಮಾಡಲು ಕಾಯುತ್ತಿದ್ದಾರೆ. ಇಂತಹುದ್ದಕ್ಕೆ ಹೆದರುವ ಪ್ರಶ್ನೆಯೆ ಇಲ್ಲ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಅವರು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪಾದನೆಗಳಿಗೆ ತಿರುಗೇಟು ನೀಡಿದರು.


ಇಲ್ಲಿನ ಗಾಂಧಿ ಮೈದಾನದ ನಗರಸಭೆ ರಂಗಮಂದಿರದಲ್ಲಿ ನಗರಸಭೆ ವತಿಯಿಂದ ಆ. ೧೩ರಿಂದ ೧೫ರವರೆಗೆ ನಡೆಯುವ ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಮನೆಮನೆ ಮೇಲೂ ರಾಷ್ಟ್ರಧ್ವಜ ಹಾರಿಸುವುದು ದೇಶದ ಕೆಲಸ. ಇಲ್ಲಿ ಪಕ್ಷ, ಜಾತಿಮತ ಬೇಧ ಮರೆತು ಕೆಲಸ ಮಾಡಬೇಕು. ಟೀಕೆ ಮಾಡುವ ಕೆಲವರು ಬಂದು ಕೆಲಸ ಮಾಡಬೇಕು. ಆಗ ರಾಷ್ಟ್ರಸೇವೆಯಲ್ಲಿ ಅವರು ತೊಡಗಿಸಿಕೊಂಡಂತೆ ಆಗುತ್ತದೆ ಎಂದು ಹೆಸರು ಹೇಳದೆ ಛೇಡಿಸಿದರು.


ಬಾವುಟ ತಯಾರಿಸುವಾಗ ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗಿದೆ. ಸಣ್ಣಪುಟ್ಟ ಲೋಪವನ್ನು ಕೆಲವರು ಎತ್ತಿ ಆಡುವ ಕೆಟ್ಟ ಮನಸ್ಥಿತಿಯವರು ಇದ್ದಾರೆ. ಸಾರ್ವಜನಿಕರು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಧ್ವಜ ತಯಾರಿಸಲು ಯಾರ ಬಳಿಯೂ ಹಣವನ್ನು ವಸೂಲಿ ಮಾಡಿಲ್ಲ ಎಂದು ಹೇಳಿದರು. 


ತಾಲೂಕಿನಲ್ಲಿ ೫೦ರಿಂದ ೬೦ ಸಾವಿರ ಮನೆ ಇದ್ದು, ಹೆಚ್ಚುವರಿಯಾಗಿ ೧೭ ಸಾವಿರ ಬಾವುಟವನ್ನು ಎಲ್ಲ ರೀತಿಯಲ್ಲೂ ಸಿದ್ಧಪಡಿಸಲಾಗಿದೆ. ಗುರುವಾರದಿಂದ ಶಾಲಾಕಾಲೇಜು, ಸಂಘಸಂಸ್ಥೆಗಳ ಮೂಲಕ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಗುತ್ತದೆ. ಮನೆಗೊಂದೇ ಬಾವುಟ ಹಾರಿಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸದಸ್ಯರಾದ ಟಿ.ಡಿ.ಮೇಘರಾಜ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ತಾಲ್ಲೂಕು ಪಂಚಾಯ್ತಿ ಇಓ ಪುಷ್ಪಾ ಕಮ್ಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಟಿಎಪಿಎಂಸಿಎಸ್ ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರಸಭಾ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *