ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಗ್ರಾಮದ ಇಬ್ಬರು ವಿದ್ಯಾರ್ಥಿನಿಯರು ಈ ಬಾರಿಯ ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ಅಂತಿಮ ವರ್ಷದ ಕಲಾ ವಿಭಾಗದಲ್ಲಿ ರ್ಯಾಂಕ್ ಗಳಿಸಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ರಿಪ್ಪನ್ಪೇಟೆ ಪದವಿ ಕಾಲೇಜಿಗೆ ಎರಡು ರ್ಯಾಂಕ್ ತಂದುಕೊಟ್ಟಂತಹ ಕಾವ್ಯ ಸಿ ಹಾಗೂ ಸಿಂಧು ಜೆ ರವರಿಗೆ ಕೂರಂಬಳ್ಳಿ ಗ್ರಾಮದ ಕಾವ್ಯ ಸಿ ರವರ ಸ್ವಗೃಹದಲ್ಲಿ ಇಬ್ಬರು ಪ್ರತಿಭಾನ್ವಿತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸೂಡೂರು ಸಮೀಪದ ಕೂರಂಬಳ್ಳಿ ಗ್ರಾಮದ ರೈತ ಕುಟುಂಬದ ಚಂದ್ರಶೇಖರ್ ಮತ್ತು ರೇಣುಕಾ ರವರ ಪುತ್ರಿ ಕುಮಾರಿ ಕಾವ್ಯ ಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಮತ್ತು ಸೂಡೂರು ಗ್ರಾಮದ ಗಣಪತಿ ಮತ್ತು ಗಿರಿಜಮ್ಮ ರವರ ಪುತ್ರಿ ಕುಮಾರಿ ಸಿಂಧು ಜೆ ಕುವೆಂಪು ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಕೃಷಿ ಕುಟುಂಬದಲ್ಲಿ ಹುಟ್ಟಿದ ಈ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದುಕೊಂಡು ರಿಪ್ಪನ್ ಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು. ನಂತರ ರಿಪ್ಪನ್ ಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಅಂತಿಮ ಪದವಿಯನ್ನು ಮುಗಿಸಿದ ಇವರುಗಳು 2021- 22 ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಕಲಾವಿಭಾಗದಲ್ಲಿ ರ್ಯಾಂಕ್ ಪಡೆಯುವುದರ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.
ಪ್ರೌಢ ಶಿಕ್ಷಣ,ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸಹಪಾಠಿಗಳಾಗಿ ಪಡೆದುಕೊಂಡ ಇವರುಗಳು ಈಗ ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಪದವಿಗಾಗಿ ಶಿಕ್ಷಣವನ್ನು ಪಡೆಯುತ್ತಿದ್ದು. ಬಿಎಡ್ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿಯನ್ನು ಪಡೆದು ಉಪನ್ಯಾಸಕಿಯರಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸುವ ಅಭಿಲಾಷೆಯನ್ನು ಪೋಸ್ಟ್ ಮ್ಯಾನ್ ಸುದ್ದಿ ಬಳಗದವರೊಂದಿಗೆ ಹಂಚಿಕೊಂಡರು.
ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವುದರ ಮೂಲಕ ಅದ್ಭುತ ಸಾಧನೆಗಳನ್ನು ಮಾಡಿದ ಈ ವಿದ್ಯಾರ್ಥಿಗಳಿಗೆ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಮತ್ತು ರಿಪ್ಪನ್ಪೇಟೆ, ಸೂಡೂರು ಹಾಗೂ ಕೂರಂಬಳ್ಳಿ ಗ್ರಾಮದ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಸರ್ಕಾರಿ ಶಾಲೆ,ಕಾಲೇಜು ಎಂದರೆ ಮೂಗು ಮುರಿಯುವವರು ಇವರ ಸಾಧನೆಯನ್ನು ನೋಡಿ ಕಲಿಯಬೇಕಾಗಿದೆ,ನಗರ ಪ್ರದೇಶಗಳಿಗೆ,ಟ್ಯೂಷನ್ ಪಡೆಯುವಂತವರಿಗೆ ಮೀಸಲಾಗಿದ್ದ ರ್ಯಾಂಕ್ ಗಳನ್ನು ನಮ್ಮೂರಿನ ವಿದ್ಯಾರ್ಥಿನಿಯರು ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಹಳ್ಳಿ ಮಕ್ಕಳ ಈ ಅದ್ಭುತ ಸಾಧನೆಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಹೃದಯತುಂಬಿ ಅಭಿನಂದನೆಗಳನ್ನು ತಿಳಿಸುತ್ತಾ ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಲಿ ಎಂದು ಹಾರೈಸುತ್ತದೆ.
ರಿಪ್ಪನ್ಪೇಟೆ ಪ್ರಥಮ ದರ್ಜೆ ಕಾಲೇಜಿಗೆ ಕೀರ್ತಿ ತಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಂದರ್ಶನದ ವೀಡಿಯೋ ಇಲ್ಲಿ ವೀಕ್ಷಿಸಿ👇