ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಸಂಬಂಧ ನೀಡಿದ್ದ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ಗೆ ಜೀವ ಬೆದರಿಕೆವೊಡ್ಡಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಫೆ.21ರಂದು ಅವರಿಗೆ ಬೆದರಿಕೆ ಕರೆ ಬಂದಿದೆ. ಮುಸ್ತಾಕ್ ಅಲಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶವನ್ನು ಪ್ರಕಟಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಿಮ್ಮ ತಲೆಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ ಮುಂದಿನ ದಿನ ನಿಮ್ಮ ಹೆಂಡಿರು, ಮಕ್ಕಳೇ ನಮ್ಮ ಟಾರ್ಗೆಟ್ ನೆನಪಿಡಿ. ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆವೊಡ್ಡಿದ್ದಾನೆ.
ಈ ಸಂಬಂಧ ಡಿ.ಎಸ್. ಅರುಣ್ ಅವರ ಆಪ್ತ ಸಹಾಯಕ ವಾಗೀಶ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಬೆದರಿಕೆ ಕುರಿತು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
		 
                         
                         
                         
                         
                         
                         
                         
                         
                         
                        