ಹೊಸನಗರ : ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಲು-ಬೆಳೆಸಲು ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಅವರು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇಂದು ಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಐದು ವರ್ಷಗಳ ಸರಣಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ lಮಾತನಾಡಿದರು.ಕನ್ನಡ ಭಾಷೆ ಪ್ರಪಂಚದ ಅನೇಕ ಪ್ರಚಲಿತ ಭಾಷೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಭಾರತರತ್ನ ಪ್ರಶಸ್ತಿಗೆ ಪುರಸ್ಕೃತರಾದ ಹಾಗೂ ಪ್ರಪಂಚದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಡಾಕ್ಟರೇಟ್ ಪಡೆದ ವಿಜ್ಞಾನಿ ಯು .ಆರ್ .ರಾವ್ ತನ್ನ ಯಶಸ್ಸಿಗೆ ಕಾರಣವಾದ ಕನ್ನಡದ ಪ್ರಾಥಮಿಕ ಶಿಕ್ಷಣವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದುದ್ದನ್ನು ನೆನಪಿಸಿದರು. ಈ ರೀತಿ ಅನೇಕ ಸಾಧನೆ ಮಾಡಿದ ಸಾಧಕರ ಪ್ರಾಥಮಿಕ ಶಿಕ್ಷಣ ಕನ್ನಡವೇ ಆಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕೆ. ಇಲಿಯಾಸ್ ಮಾತನಾಡಿ ಕನ್ನಡದ ಉಳಿವು ನಮ್ಮೆಲ್ಲರ ಕೈಯಲ್ಲಿದೆ, ಅದನ್ನು ಮರೆಯದೆ ಕನ್ನಡಿಗರಾದ ನಾವುಗಳು ಕನ್ನಡವನ್ನು ಹೆಮ್ಮೆಯಿಂದ ನಮ್ಮ ಮಕ್ಕಳಿಗೆ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುವುದರ ಮುಖಾಂತರ ಕನ್ನಡವನ್ನು ಬೆಳೆಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗುಲಾಬಿ ಮರಿಯಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹೊಸನಗರ ಪಟ್ಟಣ ವರ್ತಕರ ಸಂಘದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ. ನರಸಿಂಹ ರವರಿಗೆ ಸನ್ಮಾನಿಸಿದರು. ಸನ್ಮಾನದ ನಿರ್ವಹಣೆಯನ್ನು ವರ್ತಕರ ಸಂಘದ ಅಧ್ಯಕ್ಷ ವಿಜಯೇಂದ್ರ ಶೇಟ್ ನಿರ್ವಹಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ.ನರಸಿಂಹ ವಹಿಸಿದ್ದರು.
ಸಭೆಯ ಮೊದಲಲ್ಲಿ ಕಸಾಪ ಸದಸ್ಯ ಹೆಚ್ .ಸಿ.ತಿಮ್ಮಪ್ಪ ಪ್ರಾರ್ಥನೆ ಮಾಡಿದರು. ಶಾಸಕರ ಮಾದರಿ ಶಾಲೆಯ ಮಕ್ಕಳು ನಾಡಗೀತೆಯನ್ನು ಹಾಡಿದರು. ಕುಮಾರಿ ಆರ್ವಿ ಕ್ಯಾಸಿಯೋ ದಲ್ಲಿ ಕನ್ನಡ ಗೀತೆಗಳನ್ನು ನುಡಿಸಿದರು. ಸಭೆಯ ಮೊದಲಲ್ಲಿ ಕುಬೇಂದ್ರಪ್ಪ ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ಡಾ.ಸುಧಾಕರ್ ವಂದಿಸಿದರು. ಕಾರ್ಯಕ್ರಮವನ್ನು ತಾಲೂಕುಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್ .ಆರ್. ಪ್ರಕಾಶ್ ನಿರೂಪಿಸಿದರು.