ರಿಪ್ಪನ್ ಪೇಟೆ : ಮನೆಯ ಹಿಂಬದಿ ಇರುವ ತೆರೆದ ಬಾವಿಗೆ ಸೋಮವಾರ ರಾತ್ರಿ ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.
ರಿಪ್ಪನ್ ಪೇಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಂಜನೇಯ (ಅಂಜಿ) (25) ಮನೆಯ ಹಿಂಬದಿಯಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ 10.30 ರ ವೇಳೆ ಮನೆಯ ಕಾಂಪೌಂಡಿನ ಒಳಗಡೆ ಇದ್ದ ತೆರೆದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಈ ತೆರೆದ ಬಾವಿಗೆ ಬಿದ್ದ ಪರಿಣಾಮ ತಲೆಗೆ ಭೀಕರ ಪೆಟ್ಟಾಗಿದ್ದು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.
ಮನೆಯ ಮಾಲೀಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಪೌಂಡಿನ ಒಳಗಡೆಯ ತೆರೆದ ಬಾವಿ ಇದ್ದರೂ ಅದನ್ನು ಮುಚ್ಚುವ ಗೋಜಿಗೆ ಹೋಗದೆ ಇದ್ದಿದ್ದರಿಂದ ಅಮಾಯಕ ಯುವಕ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.