ತೀರ್ಥಹಳ್ಳಿ : ಶರಾವತಿ ವರಾಹಿ ಚಕ್ರ ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಭೂಮಿ ಮತ್ತು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಇಂದು ಕಲ್ಲುಕೊಪ್ಪದಲ್ಲಿ ಮೂರು ದಿನ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ ಚುನಾವಣೆ ಇರಲಿ ಬಿಡಲಿ ಸಂತ್ರಸ್ತರಿಗೆ ನ್ಯಾಯಕೊಡಿಸಬೇಕು. ಈ ಭಾಗದಲ್ಲಿ ನೆಲೆಸಿರುವ ಸಂತ್ರಸ್ತರ ಪಟ್ಟಿ ಮಾಡಿ ಈ ಕಾಯ್ದೆ ಅಡಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ಗೆ ಪಟ್ಟಿ ನೀಡುವಂತೆ ಕೋರಿದ ಕಾಗೋಡು. ಬಂದವರಿಗೆಲ್ಲಾ ಹಕ್ಕುಪತ್ರ ಕೊಡಿ ಎಂದು ಅರ್ಜಿ ಕೊಡುವುದಲ್ಲವೆಂದು ಗುಡುಗಿದರು.
ಸರ್ಕಾರ ರಿಲೀಸ್ ಮಾಡಿರುವ ಭೂಮಿ ಇದೆ. ತಹಶೀಲ್ದಾರ್ ನ್ನ ಭೇಟಿ ಮಾಡಬೇಕು. ಹೋರಾಟವನ್ನ ಅಂತಿಮಘಟ್ಟದ ವರೆಗೆ ತೆಗೆದುಕೊಂಡ ಹೋಗಬೇಕು. ಮಂಜುನಾಥ್ ಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ ಅವರಿಗೆ ಸಾಷ್ಟಂಗ ನಮಸ್ಕಾರ ಮಾಡುತ್ತೇನೆ ಎಂದರು.
ಕಲ್ಕೊಪ್ಪ ಗ್ರಾಮದಿಂದ ಚಾಲನೆ ಪಡೆದ ಈ ಪಾದಯಾತ್ರೆ ತೀರ್ಥಹಳ್ಳಿಯವರೆಗೆ ನಡೆಯುವ ಈ ಪಾದಯಾತ್ರೆ. 45 ಕಿಮಿ ದೂರದ ತೀರ್ಥಹಳ್ಳಿಗೆ ಪ್ರಥಮ ದಿನವಾದ ಇಂದು ಕನ್ನಂಗಿಯ ವರೆಗೆ ಕ್ರಮಿಸಲಾಗುತ್ತಿದೆ.
ಪಾದಯಾತ್ರೆ ಕನ್ನಂಗಿಯಲ್ಲಿ ವಾಸ್ತವ್ಯ ಹೂಡಲಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಕನ್ನಂಗಿಯಿಂದ ಹೊರಡಲಿದ್ದು. ಇಲ್ಲಿಂದ ಬಾಳಗಾರುವಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆ.28 ರಂದು ಬಾಳಗಾರುವಿನಿಂದ ಹೊರಟು ತೀರ್ಥಹಳ್ಳಿ ತಲುಪಲಿದ್ದಾರೆ.
1962 ರಿಂದ ಲಿಂಗನಮಕ್ಕಿ ಜಲಾಶಯಕ್ಕಾಗಿ ಶರಾವತಿ ನದಿಪಾತ್ರದ 504 ಹಳ್ಳಿಗಳು ಮುಳುಗಡೆಯಾಗಿ, 25 ಸಾವಿರ ಕುಟುಂಬಗಳ 3 ಲಕ್ಷ ರೈತರು ನಿರಾಶ್ರಿತರಾದರು. 5000 ಹೆಕ್ಟೇರ್ ಕೃಷಿ ಭೂಮಿ ಮುಳುಗಡೆ ಆಗಿತ್ತು.ತೀರ್ಥಹಳ್ಳಿ ತಾಲೂಕಿನ ಹಣಗೆರೆ, ಕಲ್ಲುಕೊಪ್ಪ, ಅರನಲ್ಲಿ, ಕೆರೆಹಳ್ಳಿ, ಕನ್ನಂಗಿ, ಸಂಕ್ಲಾಪುರ, ಅಲಸೆ, ಮತ್ತಿತರ ಕಡೆ ನೆಲೆಸಿದರು. ಕೆಲವರು ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ಹೊಳೆಹೊನ್ನೂರು, ಸಾಗರದಲ್ಲಿ ನೆಲೆಸಿದರು.ಹಿರೇಭಾಸ್ಕರ್ ಮತ್ತು ಮಾಣಿ ಜಲಾಶಯದಲ್ಲಿ ಸಂತ್ರಸ್ತರಾಗಿರುವ ಇವರಿಗೆ ನ್ಯಾಯಯುತ ಪರಿಹಾರ ದೊರೆತಿಲ್ಲ. ತಕ್ಷಣವೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ನ್ಯಾಯಬದ್ಧ ಪರಿಹಾರವನ್ನ ಈಗಿನ ಮೌಲ್ಯಕ್ಕೆ ಸಮನಾಗಿ ನೀಡಬೇಕು.
ಶರಾವತಿ ಸಂತ್ರಸ್ತರು ಉಳುಮೆ ಮಾಡುತ್ತಿರುವ ಕೃಷಿಭೂಮಿಯನ್ನ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಅಭಯಾರಣ್ಯ ಅಕ್ರಮ ಭೂಕಬಳಿಕೆ ಕೇಸಿನ ಮೂಲಕ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು.ಮುಳುಗಡೆ ಸಂತ್ರಸ್ತರೆಲ್ಲರಿಗೂ ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಈ ಪಾದಯಾತ್ರೆನಡೆದಿದೆ.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ನ ಆರ್.ಎಂ.ಮಂಜುನಾಥ್ ಗೌಡ, ಜೆಡಿಎಸ್ ನ ಶ್ರೀಕಾಂತ್, ವೈದ್ಯರಾದ ಸುಂದರೇಶ್, ವಕೀಲ ಶ್ರೀಪಾಲ್, ತೀ.ನಾ.ಶ್ರೀನಿವಾಸ್, ಜಯಂತ್ ಮೊದಲಾದವರು ಭಾಗಿಯಾಗಿದ್ದರು.
ವರದಿ : ಪ್ರಶಾಂತ್ ಮೇಗರವಳ್ಲಿ