POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ

Screenshot 2025 06 05 21 48 40 149 com.whatsapp edit

ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರ ; ತಾಲೂಕಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಇಂತಹ ತಂತ್ರಜ್ಞಾನದ ಬೆಳವಣಿಗೆಯ ಕಾಲದಲ್ಲಿಯೂ ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿರುವುದು ವಿಪರ‍್ಯಾಸ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮೆಸ್ಕಾಂ ಕಾರ‍್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ,
ಹೊಸನಗರಕ್ಕೆ 110/33 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯು ತ್ವರಿತಗತಿಯಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ನೀಡಬೇಕು. ಗುಣಮಟ್ಟದ ವಿದ್ಯುತ್ ನೀಡುವುದಾಗಿ ಜನತೆಗೆ ಜನಪ್ರತಿನಿಧಿಗಳು ಭರವಸೆ ನೀಡಿದ್ದೇವೆ. ಅಧಿಕಾರಿಗಳು ಇದಕ್ಕೆ ಪೂರಕವಾಗಿ ಕಾರ‍್ಯನಿರ್ವಹಿಸಬೇಕು ಎಂದು ಮೆಸ್ಕಾಂ ಇಂಜಿನಿಯರ್ ಚಂದ್ರಶೇಖರ್ ಅವರಿಗೆ ತಿಳಿಸಿದರು.

ಕೆಡಿಪಿ ಸದಸ್ಯರಾದ ಆಸೀಫ಼್ ಭಾಷಾ ಮಾತನಾಡಿ ರಿಪ್ಪನ್ ಪೇಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಬಾರಿ 78% ಫಲಿತಾಂಶ ಬಂದಿತ್ತು ಆದರೆ ಈ ಬಾರಿ ಕೇವಲ 62% ಫಲಿತಾಂಶ ಬಂದಿದ್ದು ಗಣಿತ ವಿಷಯದಲ್ಲಿ 55% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಪಠ್ಯ ಭೋಧನಾ ವಿಧಾನದ ಬಗ್ಗೆ ಸಂಶಯ ಮೂಡಿಬಂದಿದೆ ಈ ಬಗ್ಗೆ ಕೂಡಲೇ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಭೆಯ ಗಮನಕ್ಕೆ ತಂದಾಗ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡಲೇ ಸಂಬಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿ ಇಓ ಕೃಷ್ಣ ಮೂರ್ತಿ ರವರಿಗೆ ತಾಕೀತು ಮಾಡಿದರು.

ಡಿಎಪಿ ರಸಗೊಬ್ಬರ ರಿಪ್ಪನ್‌ಪೇಟೆಯಲ್ಲಿ ಖಾಸಗಿ ಅಂಗಡಿಗಳಲ್ಲಿ ಹೆಚ್ಚು ದರಕ್ಕೆ ಮಾರಲಾಗುತ್ತಿದೆ ಎಂದು ಸದಸ್ಯ ಎನ್.ಚಂದ್ರೇಶ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆರಗ ಜ್ಞಾನೇಂದ್ರ, ಕೇಂದ್ರ ಸರ್ಕಾರ ರೈತರಿಗೆ ಅನುವಾಗುವ ನಿಟ್ಟಿನಲ್ಲಿ ರಸಗೊಬ್ಬರಕ್ಕೆ ಸಹಾಯಧನ ನೀಡುತ್ತಿದೆ. ಮಾರಾಟ ಮಾಡಲು ನಿಯಮಾವಳಿಗಳಿವೆ. ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿತಸ್ಥ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ತಾಲೂಕಿನಲ್ಲಿ ಈವರೆಗೆ ವಾಡಿಕೆಗಿಂತ ಶೇ.160 ರಷ್ಟು ಹೆಚ್ಚುವರಿ ಮಳೆಯಾಗಿದೆ. ಬಿತ್ತನೆ ಕಾರ‍್ಯ ಆರಂಭವಾಗುವ ಹಿನ್ನೆಲೆಯಲ್ಲಿ 400 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ಶುಚಿರುಚಿಯಾದ ಆಹಾರ ಹಾಗೂ ನಿಯಮಾನುಸಾರ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ‍್ಯಗಳನ್ನು ಒದಗಿಸುವಲ್ಲಿ ತಾತ್ಸಾರ ತೋರಿದಲ್ಲಿ ಸಂಬಂಧಪಟ್ಟ ಅಧಿಕಾರಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಮ ನಿರ್ದೇಶಿತ ಸದಸ್ಯೆ ಸುಮಾ ಸುಬ್ರಮಣ್ಯ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಮಶಾನ, ರಸ್ತೆ, ಆಟದ ಮೈದಾನ, ವಿದ್ಯುತ್ ಮಾರ್ಗ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಮಾನವೀಯತೆ ಮರೆತವರಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ. ಮಲೆನಾಡು ಭಾಗದಲ್ಲಿ ಜನರ ಜೀವನ ಸಂಕಷ್ಟ ದಿಂದ ಕೂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಅರಿಯಬೇಕು ಎಂದು ಹೇಳಿದರು.

ಕೆಡಿಪಿ ಸದಸ್ಯ ಆಸೀಫ಼್ ಮಾತನಾಡಿ ರಿಪ್ಪನ್ ಪೇಟೆ ಆಸ್ಪತ್ರೆಯಲ್ಲಿ ಶುಶ್ರೂಕಿಯರ ಕೊರತೆ ಇದ್ದು ಕೆಲ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಹಾಗೂ ನಾಯಿ ಕಡಿತದ ಲಸಿಕೆ ಲಭ್ಯವಿಲ್ಲದೇ ಸಾರ್ವಜನಿಕರು ಪರದಾಡುತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಈ ಸಂಧರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ತಾಲೂಕು ಆರೋಗ್ಯಾಧಿಕಾರಿಗಳಿಗೆ ಕೂಡಲೇ ಈ ಬಗ್ಗೆ ಗಮನವಹಿಸುವಂತೆ ಸೂಚಿಸಿದರು.

ಅಧಿಕ ಮಳೆಯಿಂದ ತಾಲೂಕಿನಲ್ಲಿ ಈ ವರ್ಷ 13 ಮನೆಗಳಿಗೆ ಹಾನಿಯಾಗಿದೆ. 26 ಅನಧಿಕೃತ ಮನೆಗಳಿಗೆ ಹಾನಿಯಾಗಿದೆ. 3 ಸಂತ್ರಸ್ಥರಿಗೆ ಪರಿಹಾರ ಒದಗಿಸಲಾಗಿದೆ. ತುರ್ತು ಸಂದರ್ಭಕ್ಕೆ ಸ್ಪಂದಿಸಲು ಸಹಾಯವಾಣಿ ತೆರೆಯಲಾಗಿದೆ ಎಂದು ತಹಸೀಲ್ದಾರ್ ಎಚ್.ಜೆ.ರಶ್ಮಿ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿಗತಿ, ಮೂಲಸೌಕರ್ಯ ವ್ಯವಸ್ಥೆ, ತುರ್ತು ದುರಸ್ತಿ ಆಗಬೇಕಿರುವ ಕೊಠಡಿಗಳ ಮಾಹಿತಯನ್ನು ಬಿಇಒ ಕೃಷ್ಣಮೂರ್ತಿ ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಕೂಡಲೇ ನೆಲಸಮಗೊಳಿಸುವಂತೆ ಶಾಸಕರಾದ ಆರಗ ಜ್ಞಾನೇಂದ್ರ ಸೂಚನೆ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿನಲ್ಲಿ ಸಾಧನೆ ಕುಂಠಿತಗೊಂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ತಾ.ಪಂ. ಕಾರ‍್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ, ನಾಮನಿರ್ದೇಶಿತ ಸದಸ್ಯರಾದ ವಾಟಗೋಡು ಸುರೇಶ್, ಆಸಿಫ್, ಎಂ.ಎಂ.ಪರಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ತೀರ್ಥಹಳ್ಳಿ ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್,  ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.