ಜಾತ್ರೆಗೆ ಚಾಲನೆ, ಕ್ಷೇತ್ರದ ಅಭಿವೃದ್ಧಿಗೆ ₹28 ಕೋಟಿ: ಅಮ್ಮನಘಟ್ಟದಲ್ಲಿ ವಿಶೇಷ ಸಂಭ್ರಮ | Ammanaghatta Sri Jenukallamma Devi annual festival begins with traditional Kankana Dharana. Navaratri celebrations and a ₹28 crore temple development proposal are key highlights.
ರಿಪ್ಪನ್‌ಪೇಟೆ: ಸುಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕಂಕಣಧಾರಣೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ಹಾಗೂ ಧಾರ್ಮಿಕ ಬಳಗದ ನೇತೃತ್ವದಲ್ಲಿ ದೇವಿಗೆ ಕಂಕಣ ಕಟ್ಟುವ ಧಾರ್ಮಿಕ ವಿಧಿವಿಧಾನ ನೆರವೇರಿತು. ಇದರೊಂದಿಗೆ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು.
ಪಿತೃಪಕ್ಷದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ನಡೆಯುವ ಅವಧಿಯಲ್ಲಿ ಬರುವ ಎರಡು ಮಂಗಳವಾರ ಹಾಗೂ ಎರಡು ಶುಕ್ರವಾರಗಳಂದು ಜಾತ್ರೆ ನಡೆಯುವುದು ಅಮ್ಮನಘಟ್ಟ ಕ್ಷೇತ್ರದ ವಿಶೇಷ ಪರಂಪರೆಯಾಗಿದೆ. ಈ ಬಾರಿ ಸೆಪ್ಟೆಂಬರ್ 29, ಅಕ್ಟೋಬರ್ 2, ಅಕ್ಟೋಬರ್ 6 ಹಾಗೂ ಅಕ್ಟೋಬರ್ 9ರಂದು ಜಾತ್ರಾ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 21ರವರೆಗೆ ನವರಾತ್ರಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಲಿದ್ದು, ವಿಜಯದಶಮಿಯಂದು ಚಂಡಿಕಾಹೋಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀದೇವಿ ಪಾರಾಯಣ ಹಾಗೂ ಮುತ್ತೈದೆಯರಿಂದ ಉಡಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
₹28 ಕೋಟಿ ಅಭಿವೃದ್ಧಿ ಯೋಜನೆ ಪ್ರಸ್ತಾವನೆ
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಾಲಯವನ್ನು ರಾಜ್ಯದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ₹28 ಕೋಟಿ ಅಂದಾಜು ವೆಚ್ಚದ ಬೃಹತ್ ಅಭಿವೃದ್ಧಿ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತಿಳಿಸಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶ್ರಮದಿಂದ ಈಗಾಗಲೇ ₹1 ಕೋಟಿ ಅನುದಾನದಲ್ಲಿ ಕಲ್ಯಾಣಿ (ಪುಷ್ಕರಣಿ), ಸಾರ್ವಜನಿಕ ಶೌಚಾಲಯ ಹಾಗೂ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ಚಂದ್ರಮೌಳಿ, ಕಾರ್ಯದರ್ಶಿ ಗುರುರಾಜ ಭಟ್, ಎಂ.ಪಿ. ಸುರೇಶ್ ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.