Headlines

ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ: ಎಚ್.ಎಸ್. ಸುಂದರೇಶ್

IMG 20260926 WA0003

ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ: ಎಚ್.ಎಸ್. ಸುಂದರೇಶ್ | Suda chairman H.S. Sundaresha clarified his recent remarks against Congress leaders, expressed regret for using singular language and said he will abide by the party’s decision.

ಶಿವಮೊಗ್ಗ: ಸ್ವಪಕ್ಷದ ನಾಯಕರ ವಿರುದ್ಧ ಇತ್ತೀಚೆಗೆ ನೀಡಿದ್ದ ಹೇಳಿಕೆಗಳ ಕುರಿತು ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಸ್ಪಷ್ಟನೆ ನೀಡಿದ್ದಾರೆ. ಹಲವು ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದ್ದು, ಅದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿಯಿಂದ ಬಂದಿರುವ ಶೋಕಾಸ್ ನೋಟಿಸ್‌ಗೆ ಬುಧವಾರ ಉತ್ತರ ನೀಡುವುದಾಗಿ ಹೇಳಿದರು. ನೋಟಿಸ್‌ನಲ್ಲಿ ಕೇಳಿರುವ ಎಲ್ಲಾ ವಿಚಾರಗಳಿಗೆ ಸಮಜಾಯಿಷಿ ನೀಡಲಿದ್ದು, ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ತಿಳಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಹಾಗೂ ಮಂಜುನಾಥ್ ಭಂಡಾರಿ ಅವರಂತಹ ಹಿರಿಯ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ. ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ ಎಂದು ಸುಂದರೇಶ್ ಹೇಳಿದರು.
ಸಚಿವ ಮಧು ಬಂಗಾರಪ್ಪ ಅವರ ಕುರಿತು ಮಾತನಾಡುವ ಸಂದರ್ಭದಲ್ಲಿಯೂ ಏಕವಚನ ಬಳಕೆಯಾಗಿರುವುದು ತಪ್ಪಾಗಿದೆ. ಅವರಿಗೆ ನೀಡಬೇಕಾದ ಗೌರವದ ವಿಚಾರದಲ್ಲಿ ತಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ. ಯೋಗೇಶ್ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಈಗಲೂ ಬದ್ಧನಾಗಿರುವುದಾಗಿ ಹೇಳಿದರು.

ತಮ್ಮ ವಿರುದ್ಧ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ತೀರ್ಥಹಳ್ಳಿಗೆ ತೆರಳುವುದಾಗಿ ಸುಂದರೇಶ್ ತಿಳಿಸಿದರು. ಅಲ್ಲಿ ಸಭೆ ನಡೆಯಲಿದ್ದು, ಯಾರಾದರೂ ಪ್ರಶ್ನೆಗಳೊಂದಿಗೆ ಬಂದರೆ ವೇದಿಕೆಯಲ್ಲೇ ಉತ್ತರ ನೀಡುವುದಾಗಿ ಹೇಳಿದರು.

ಸಂಗಮೇಶ್, ಬೇಳೂರು ಗೋಪಾಲಕೃಷ್ಣರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ತಮ್ಮ ಹಿಂದಿನ ಬೇಡಿಕೆಗೆ ಈಗಲೂ ಬದ್ಧನಾಗಿರುವುದಾಗಿ ಸುಂದರೇಶ್ ಹೇಳಿದರು. ಬೇಳೂರು ಗೋಪಾಲಕೃಷ್ಣ ಅವರಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಸಂಗಮೇಶ್ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಬೇಕು ಎಂಬ ಬೇಡಿಕೆಯನ್ನೂ ಪುನರುಚ್ಚರಿಸಿದರು.

ಪಕ್ಷದಲ್ಲಿರುವ ಗೊಂದಲಗಳಿಗೆ ಕಾರಣವಾಗುತ್ತಿರುವವರ ವಿರುದ್ಧ ಕ್ರಮ ಕೈಗೊಂಡಾಗ ಮಾತ್ರ ಪಕ್ಷ ಶುದ್ಧಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಸೂಡಾದಲ್ಲಿ ಕಾರ್ಯಕ್ರಮವೊಂದಿದ್ದು, ಅದು ಮುಗಿದ ಬಳಿಕ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದರು.