ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಭೀಕರ ಸರಣಿ ಅಪಘಾತ: ಫ್ಲೈಓವರ್ನಿಂದ ಕೆಳಗೆ ಬಿದ್ದ ಆಟೋ ಚಾಲಕ | A serious chain accident involving a car, bike and auto occurred near Shivamogga Railway Station flyover, leaving several people injured and causing traffic disruption.
ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಸಮೀಪದ ಶೇಷಾದ್ರಿಪುರಂ ಫ್ಲೈಓವರ್ ಮೇಲೆ ಕಾರು, ಬೈಕ್ ಹಾಗೂ ಆಟೋ ನಡುವೆ ಸರಣಿ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದಿರುವ ಘಟನೆ ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ನಡೆದಿದೆ.
ಅಪಘಾತದ ರಭಸಕ್ಕೆ ಆಟೋ ಚಾಲಕ ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದು, ಪಿಲ್ಲರ್ ಸಮೀಪದ ಕೆಳಭಾಗದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಹರಸಾಹಸಪಟ್ಟು ಅವರನ್ನು ಮೇಲಕ್ಕೆತ್ತಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ.
ಅಪಘಾತದಲ್ಲಿ ಕಾರಿನಲ್ಲಿದ್ದವರು ಹಾಗೂ ಬೈಕ್ ಸವಾರರಿಗೂ ಗಾಯಗಳಾಗಿದ್ದು, ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕೆಲವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಪಘಾತದಿಂದ ಸಂಚಾರ ಅಸ್ತವ್ಯಸ್ತ
ಸರಣಿ ಅಪಘಾತದ ಹಿನ್ನೆಲೆಯಲ್ಲಿ ಫ್ಲೈಓವರ್ ಮೇಲೆ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಉಂಟಾಯಿತು. ಮಾಹಿತಿ ತಿಳಿಯುತ್ತಿದ್ದಂತೆ 112 ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು.
ಘಟನೆ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.