ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಗೆ 2 ವರ್ಷ ಜೈಲು | Shivamogga court sentences Dr. B.R. Ambedkar Development Corporation accountant assistant A.K. Kantaraj to 2 years rigorous imprisonment and ₹30,000 fine in a 2017 Lokayukta bribery case.
ಶಿವಮೊಗ್ಗ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಅಸಿಸ್ಟೆಂಟ್ ಎ.ಕೆ. ಕಾಂತರಾಜ್ ಅವರಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿದೆ.
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಮೂಲದ ಅಂಜನಪ್ಪ ಅವರು 2016ರಲ್ಲಿ ಅಡಿಕೆ ಹಾಳೆ ತಟ್ಟೆ ತಯಾರಿಸುವ ಸಣ್ಣ ಉದ್ಯಮ ಆರಂಭಿಸಲು ಐಎಸ್‌ಬಿ ಯೋಜನೆಯಡಿ ಸಾಲ ಹಾಗೂ ಸಹಾಯಧನಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಗೆ ₹3.50 ಲಕ್ಷ ಸಹಾಯಧನ ಸೇರಿದಂತೆ ಒಟ್ಟು ₹5 ಲಕ್ಷ ಮಂಜೂರಾಗಿತ್ತು.
ಮಂಜೂರಾದ ಸಹಾಯಧನದ ಚೆಕ್ ಹಸ್ತಾಂತರಿಸಲು ಅಕೌಂಟೆಂಟ್ ಅಸಿಸ್ಟೆಂಟ್ ಕಾಂತರಾಜ್ ಅವರು ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಅಂಜನಪ್ಪ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ 2017ರ ಜುಲೈ 7ರಂದು ಅಂದಿನ ಲೋಕಾಯುಕ್ತ ಡಿವೈಎಸ್ಪಿ ಎ. ಚಂದ್ರಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಕಾಂತರಾಜ್ ಅವರು ದೂರುದಾರರಿಂದ ₹10,000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಪ್ರಕರಣದ ಕುರಿತು ಡಿವೈಎಸ್ಪಿ ಎ. ಚಂದ್ರಪ್ಪ ಅವರು ಸುದೀರ್ಘ ತನಿಖೆ ನಡೆಸಿ, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿ ಕಾಂತರಾಜ್ ಅವರಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿದೆ.
ಸರ್ಕಾರಿ ಅಭಿಯೋಜಕರಾಗಿ ವಕೀಲ ಎಂ.ಡಿ. ಸುಂದರ್ ರಾಜ್ ಅವರು ವಾದ ಮಂಡಿಸಿದ್ದರು.