ತೀರ್ಥಹಳ್ಳಿ | ಇಬ್ಬರು ಯುವಕರ ಅಪಹರಣ, 5 ಲಕ್ಷ ರೂ.ಗೆ ಬೇಡಿಕೆ: ಮೂವರ ವಿರುದ್ಧ ದೂರು! | Three men allegedly abducted two interior decoration workers in Thirthahalli and demanded Rs. 5 lakh for their release. A complaint has been registered at Thirthahalli Police Station.
ತೀರ್ಥಹಳ್ಳಿ: ಇಂಟೀರಿಯರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರನ್ನು ಅಪಹರಿಸಿ, ಬಿಡುಗಡೆ ಮಾಡಲು 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರು ತೀರ್ಥಹಳ್ಳಿಯಲ್ಲಿ ಇಂಟೀರಿಯರ್ ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದು, ಇಬ್ಬರು ಯುವಕರು ಅವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಮೂವರು ಆರೋಪಿಗಳು ದೂರುದಾರರ ಗೋದಾಮಿಗೆ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ, “ನಿಮ್ಮ ಓನರ್ ಎಲ್ಲಿದ್ದಾನೆ? ಆತನ ಬಗ್ಗೆ ಮಾಹಿತಿ ನೀಡಿ. ಆತನನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಇಬ್ಬರು ಯುವಕರನ್ನು ತಮ್ಮ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ಬಾಳೆಬೈಲು ಸೇತುವೆ ಬಳಿ ನಿಲ್ಲಿಸಿದ್ದಾರೆ. “ನಿಮ್ಮ ಓನರ್ ಬರುವವರೆಗೂ ನಿಮ್ಮನ್ನು ಬಿಡುವುದಿಲ್ಲ. ಬಿಡುಗಡೆ ಮಾಡಬೇಕಾದರೆ 5 ಲಕ್ಷ ರೂಪಾಯಿ ನೀಡಬೇಕು” ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಯುವಕರು ಹಣ ನೀಡಲು ಒಪ್ಪದಿದ್ದಾಗ ಅವರನ್ನು ಶಿವಮೊಗ್ಗದ ಕಡೆಗೆ ಕರೆದೊಯ್ಯಲು ಆರೋಪಿಗಳು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಯುವಕರು ಜೋರಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮರುದಿನ ಬೆಳಿಗ್ಗೆಯೂ ದೂರುದಾರರನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಮನೆಗೆ ಬಂದಿರುವ ವಿಚಾರ ತಿಳಿದ ದೂರುದಾರರು ಮನೆಯಿಂದ ಹೊರಹೋಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೂರುದಾರರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
