ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ರವೀಶ್‌ಗೆ ಹೊಸನಗರದಲ್ಲಿ ಅದ್ದೂರಿ ಪೌರ ಸನ್ಮಾನ! | Hosanagara’s Malenadu High School student M.G. Raveesh selected for the national-level 5 km race walk competition. He received a grand civic felicitation in Hosanagara.
ಹೊಸನಗರ: ರಾಜ್ಯಮಟ್ಟದ ಕ್ರೀಡಾಕೂಟದ 5 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಹೊಸನಗರದ ಮಲೆನಾಡು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಂ.ಜಿ. ರವೀಶ್ ಅವರಿಗೆ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಪೌರ ಸನ್ಮಾನ ನೆರವೇರಿಸಲಾಯಿತು.
ರವೀಶ್ ಅವರು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 5 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡುತ್ತಿರುವ ರವೀಶ್ ಅವರ ಈ ಯಶಸ್ಸಿನ ಹಿಂದೆ ಶಿಕ್ಷಕರ ನಿರಂತರ ಮಾರ್ಗದರ್ಶನ ಹಾಗೂ ಅವರ ಸ್ವಂತ ಪರಿಶ್ರಮ ಪ್ರಮುಖ ಪಾತ್ರ ವಹಿಸಿದೆ. ರವೀಶ್ ಅವರ ಸಾಧನೆಯಿಂದ ಹೊಸನಗರ ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಕ್ರೀಡಾ ಕ್ಷೇತ್ರದ ಹಿರಿಮೆ ಮತ್ತಷ್ಟು ಹೆಚ್ಚಾಗಿದೆ.
ಅದ್ದೂರಿ ಮೆರವಣಿಗೆಯಲ್ಲಿ ಸನ್ಮಾನ:
ರವೀಶ್ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಮಾವಿನಕೊಪ್ಪದ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ಮಲೆನಾಡು ಪ್ರೌಢಶಾಲೆಯವರೆಗೆ ತೆರೆದ ಜೀಪಿನಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯು ಪಟ್ಟಣದ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ವರ್ತಕರ ಸಂಘದ ಪದಾಧಿಕಾರಿಗಳು, ಸಂಘದ ಅಧ್ಯಕ್ಷ ಮಲೆಬಯಲು ಪೂರ್ಣೇಶ್ ಹಾಗೂ ಗ್ರಾಮಸ್ಥರು ರವೀಶ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಂದುವರಿದು ಶಾಲಾ ಆವರಣ ತಲುಪಿತು.
ಶಾಲಾ ಆವರಣದಲ್ಲಿ ಹಿರಿಯ ಶಿಕ್ಷಕಿ ಸೌಭಾಗ್ಯ ಅವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮ ವರ್ಣರಂಜಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ರವೀಶ್ ಅವರ ಅಜ್ಜ-ಅಜ್ಜಿ, ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ವಿದ್ಯಾರ್ಥಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಾಧನೆಯ ಹಾದಿ ಹಿಡಿದಿರುವ ರವೀಶ್ ಅವರಿಗೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
