ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತಿ-ಭಾವದ ‘ನೋನಿ’ ಸಂಭ್ರಮ: ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ, ಹರಕೆ ಸಮರ್ಪಣೆ | Traditional Noni festival celebrated with devotion in villages around Ripponpete during Diwali, featuring special prayers, rituals and community participation.
ರಿಪ್ಪನ್‌ಪೇಟೆ: ದೀಪಾವಳಿ ಹಬ್ಬಕ್ಕೂ ಮೂರು-ನಾಲ್ಕು ದಿನಗಳ ಮುನ್ನವೇ ಗ್ರಾಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸುವ ಸಾಂಪ್ರದಾಯಿಕ ‘ನೋನಿ’ ಹಬ್ಬವನ್ನು ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮಸ್ಥರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಮೇಲಿನ ಕೆರೆಹಳ್ಳಿ ಹಾಗೂ ಕೆಳಗಿನ ಕೆರೆಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಹಾಗೂ ಗ್ರಾಮಸ್ಥರು ತಮ್ಮ ಕುಟುಂಬದ ನೇಮ-ನಿಷ್ಠೆಯಂತೆ ವರ್ಷಂಪ್ರತಿ ಆಚರಿಸುವ ನೋನಿ ಹಬ್ಬವನ್ನು ಈ ಬಾರಿಯೂ ಸಂಭ್ರಮದಿಂದ ನೆರವೇರಿಸಿದರು.
ಗ್ರಾಮ ದೇವತೆಗಳು, ದೈವ, ಭೂತ, ರಣ, ಚೌಡಿ ಹಾಗೂ ಯಕ್ಷಿ ದೇವರುಗಳಿಗೆ ಭಕ್ತರು ವಿವಿಧ ಬಗೆಯ ಹರಕೆಗಳನ್ನು ಒಪ್ಪಿಸಿದರು. ಸಾತ್ವಿಕ ಪೂಜೆ ಬಯಸುವ ದೇವರುಗಳಿಗೆ ಹಣ್ಣು-ಕಾಯಿ ನೈವೇದ್ಯ ಅರ್ಪಿಸಿದರೆ, ಇನ್ನು ಕೆಲವು ಗ್ರಾಮ ದೇವತೆಗಳಿಗೆ ಸಂಪ್ರದಾಯದಂತೆ ಕುರಿ, ಕೋಳಿ ಬಲಿ ನೀಡಿ ಪೂಜೆ ಸಲ್ಲಿಸಲಾಯಿತು. ಈ ಹರಕೆ ಒಪ್ಪಿಸುವ ಕಾರ್ಯವು ದೀಪಾವಳಿಯ ಮೊದಲ ದಿನದಿಂದ ಆರಂಭವಾಗಿ ಹಬ್ಬದ ಕೊನೆಯ ದಿನದವರೆಗೂ ಜರುಗುತ್ತದೆ.
ಭೂಮಿ ಹುಣ್ಣಿಮೆ ಕಳೆಯುತ್ತಿದ್ದಂತೆ ಕೆಲವು ಗ್ರಾಮಗಳಲ್ಲಿ ಕಠಿಣ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಗ್ರಾಮ ದೇವರಿಗೆ ‘ಸಾರು’ ಹಾಕುವ ಮೊದಲು ಹೆಣ್ಣುಮಕ್ಕಳು ಹಾಗೂ ಗರ್ಭಿಣಿಯರನ್ನು ತೋಟದ ಗುಡಿಸಲುಗಳಿಗೆ ಅಥವಾ ಸಂಬಂಧಿಕರ ಮನೆಗಳಿಗೆ ಕಳುಹಿಸುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಒಂದು ವೇಳೆ ಗ್ರಾಮದಲ್ಲಿ ಹೆರಿಗೆ, ಸಾವು ಅಥವಾ ಸೂತಕ ಸಂಭವಿಸಿದರೆ ಆ ವರ್ಷ ಇಡೀ ಊರಿನಲ್ಲಿ ನೋನಿ ಆಚರಣೆಯನ್ನು ಕೈಬಿಟ್ಟು, ಮುಂದಿನ ವರ್ಷದವರೆಗೂ ಕಾಯಬೇಕಾಗುತ್ತದೆ.
ಇಂತಹ ಕಠಿಣ ನಿಯಮಗಳ ನಡುವೆಯೂ, ಗ್ರಾಮಸ್ಥರು ತಮ್ಮೊಳಗಿನ ವೈಮನಸ್ಸು, ಜಾತಿ ಭೇದಗಳನ್ನು ಮರೆತು ಒಂದೆಡೆ ಸೇರುತ್ತಾರೆ. ತಮ್ಮ ಜಮೀನಿನ ಫಸಲು, ಜನ-ಜಾನುವಾರುಗಳಿಗೆ ಯಾವುದೇ ರೋಗ-ರುಜಿನ ಬಾರದಂತೆ ಹಾಗೂ ಕಳ್ಳತನ, ಅವಘಡಗಳಿಂದ ಊರಿನ ಗಡಿ ರಕ್ಷಿಸುವಂತೆ ಗ್ರಾಮ ದೇವತೆಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸುವುದು ಈ ಆಚರಣೆಯ ವಿಶೇಷತೆಯಾಗಿದೆ.
ಪಟ್ಟಣ ವ್ಯಾಪ್ತಿಯ ಬರುವೆ ಗ್ರಾಮದ ಬನ, ಚಿಕ್ಕಬೀರನಕೆರೆ ಭೂತಪ್ಪ, ಮಲ್ಲಾಪುರದ ಮರುಬಿನಕುಣಿ ಭೂತಪ್ಪ, ಗವಟೂರು, ಕಣಬಂದೂರು, ಬೆಳಕೋಡು, ಕುಕ್ಕಳಲೆ, ವಡಗೆರೆ, ಬಟ್ಟೆಮಲ್ಲಪ್ಪ, ಹರತಾಳು, ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ, ಮಾದಾಪುರ, ಆಲವಳ್ಳಿ, ಚೌಡೇಶ್ವರಿ ಬೀದಿಯ ಯಕ್ಷಿಣಿ, ತಮ್ಮಡಿಕೊಪ್ಪ, ಬಸವಾಪುರ, ಹೆದ್ದಾರಿಪುರ, ಕೊಳವಳ್ಳಿ, ಕೋಟೆತಾರಿಗ, ಬೆಳ್ಳೂರು, ಮೂಲೆಗದ್ದೆ, ವಿಜಾಪುರ, ಕಚ್ಚಿಗೆಬೈಲು, ಕೇಶವಪುರ, ಬಾಳೂರು, ಹಾಲುಗುಡ್ಡೆ, ಮಾದ್ಲಾರದಿಂಬ, ನೇರಲುಮನೆ, ಬೆಳಂದೂರು ಹಾಗೂ ಕೆದಲುಗುಡ್ಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಊರಿನ ಹೊರಭಾಗ ಮತ್ತು ಜಮೀನಿನ ಮೇಲ್ಭಾಗದಲ್ಲಿ ನೆಲೆಸಿರುವ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಬರುವೆ ದೊಡ್ಡಿನಕೊಪ್ಪದ ಏಳು ಮಕ್ಕಳ ತಾಯಿ ಶೀಲವಂತ ಚೌಡಮ್ಮ, ಬರುವೆ ರಣದೇವರು, ಯಕ್ಷಿದೇವತೆ ಹಾಗೂ ಗಡಿ ಭೂತರಾಯ ದೇವರುಗಳ ಪೂಜೆಗಾಗಿ ಗ್ರಾಮಸ್ಥರು ಮನೆಮನೆಯಿಂದ ವಂತಿಗೆ (ವರಾಡ) ಸಂಗ್ರಹಿಸಿದರು. ಸರ್ವ ಜನಾಂಗದವರು ಒಗ್ಗೂಡಿ ದೇವರ ಬನವನ್ನು ಸ್ವಚ್ಛಗೊಳಿಸಿ, ತಳಿರು-ತೋರಣ, ಬಾಳೆ ಹಾಗೂ ಕಬ್ಬಿನ ಸುಳಿಗಳಿಂದ ಶೃಂಗರಿಸಿದರು. ಬಳಿಕ ಬುಟ್ಟಿಯಲ್ಲಿ ಹಣ್ಣು-ಕಾಯಿ, ಅರಿಶಿಣ-ಕುಂಕುಮ, ಹೂವಿನ ಹಾರ ಹಾಗೂ ಪೂಜಾ ಸಾಮಗ್ರಿಗಳನ್ನು ತುಂಬಿಕೊಂಡು ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಏಳುಮಕ್ಕಳ ಶೀಲವಂತ ದೇವತೆಗೆ ಹೂವು, ಹಣ್ಣು-ಕಾಯಿ ಸಮರ್ಪಿಸಿದರೆ, ಕಾಟಿಕಾ ದೇವರಿಗೆ ಹರಕೆ ತೀರಿಸುವ ಮೂಲಕ ಪೂರ್ವಿಕರ ಸಂಪ್ರದಾಯವನ್ನು ಇಂದಿನ ತಲೆಮಾರಿನವರು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.
