ಜಂಬಳ್ಳಿಯಲ್ಲಿ ಏಳುಮಕ್ಕಳ ಚೌಡಮ್ಮ ದೇವಿಯ ಪ್ರತಿಷ್ಠಾಪನಾ ಪೂಜೆ: ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನ | Jamballi village near Ripponpete witnessed the traditional Pratishthapana Puja of Yelumakkala Chowdamma Devi and village deities with religious rituals and devotion.
ರಿಪ್ಪನ್ಪೇಟೆ: ಸಮೀಪದ ಜಂಬಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಏಳುಮಕ್ಕಳ ಚೌಡಮ್ಮ ದೇವಿ ಹಾಗೂ ಗ್ರಾಮದ ಪರಿವಾರ ದೇವರುಗಳ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮವು ಇಂದು ಶ್ರದ್ಧಾಭಕ್ತಿ ಮತ್ತು ಧಾರ್ಮಿಕ ಸಂಭ್ರಮದೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಮಳಲಿಮಠದ ಷ.ಬ್ರ. ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಪೂಜೆ ಹಾಗೂ ರುದ್ರಾಭಿಷೇಕ ಜರುಗಿತು. ಬಳಿಕ ಏಳುಮಕ್ಕಳ ಚೌಡಮ್ಮ ದೇವಿ ಹಾಗೂ ಗ್ರಾಮದ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ತ್ಯಾರಂದೂರು ಪುರೋಹಿತರ ವರ್ಗದವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆದವು. ಇದೇ ಸಂದರ್ಭದಲ್ಲಿ ಗ್ರಾಮದ ಮುತ್ತೈದೆಯರಿಗೆ ಅರಿಶಿಣ-ಕುಂಕುಮದ ತಿಲಕವಿಟ್ಟು, ಬಾಗಿನ ಸಮರ್ಪಿಸುವ ಮೂಲಕ ಗೌರವಿಸಲಾಯಿತು.
ಜಂಬಳ್ಳಿ ಗ್ರಾಮದ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಏಳುಮಕ್ಕಳ ಚೌಡಮ್ಮ ದೇವಿ, ಪರಿವಾರ ದೇವರುಗಳು ಮತ್ತು ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
