ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಅಟ್ಟುವ ಸರಕಾರದ ಕ್ರಮಕ್ಕೆ ಮಾಜಿ ಶಾಸಕ ಬಿ.ಸ್ವಾಮಿರಾವ್ ತೀವ್ರ ಆಕ್ಷೇಪ : ಉಗ್ರ ಹೋರಾಟದ ಎಚ್ಚರಿಕೆ | Former MLA B. Swamirav strongly opposes the government’s move to relocate wild elephants to Bhadra Wildlife Sanctuary and warns of an intense protest.
ಹೊಸನಗರ: ರೈತರ ಹಿತ ಕಾಪಾಡದಿದ್ದರೆ ರಾಜ್ಯ ಸರಕಾರ ಮಲೆನಾಡು ಭಾಗದ ರೈತಾಪಿ ವರ್ಗ ಸೇರಿದಂತೆ ಹಲವು ಜನಪರ ಸಂಘಟನೆಗಳ ತೀವ್ರ ವಿರೋಧ ಎದುರಿಸಬೇಕಾದೀತು ಎಂದು ಹಿರಿಯ ರಾಜಕೀಯ ಮುತ್ಸದಿ, ಮಾಜಿ ಶಾಸಕ ಬಿ. ಸ್ವಾಮಿರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೊನಲೆ ಗ್ರಾಮ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಸುಮಾರು 39 ಕಾಡಾನೆಗಳನ್ನು ಭದ್ರ ಅಭಯಾರಣ್ಯ ಪ್ರದೇಶಕ್ಕೆ ಅಟ್ಟುವ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಅವರು ತೀವ್ರ ಅಕ್ಷೇಪ ವ್ಯಕ್ತ ಪಡಿಸಿದರು. ಕಾಡಾನೆಗಳ ಸ್ಥಳಾಂತರ ವಿಚಾರದಲ್ಲಿ ಸರಕಾರ ರೈತರ ಪರ ನಿಲುವು ತಾಳಬೇಕು. ರೈತರ ಹಿತ ಕಾಪಾಡುವಲ್ಲಿ ಸರಕಾರ ವಿಫಲವಾದರೆ ರೈತ ಪರ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು ಅಲ್ಲಿನ ಸಮಸ್ಯೆಗಳ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಏನು ಕಂಡು ಬರುತ್ತಿಲ್ಲ..?!. ಜಿಲ್ಲೆಯ ಸಚಿವರು ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇಕೆ ?. ಅವರಿಂದ ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾದಲ್ಲಿ ತಾವು ಸುಮ್ಮನಿರಲು ಸಾಧ್ಯವೇ ಇಲ್ಲ ಎಂಬ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಕ್ಷದ ಕೆಲವು ಶಾಸಕರೇ ರಾಜೀನಾಮೆ ನಾಟಕಕ್ಕೆ ಮುಂದಾಗಿರುವುದಕ್ಕೆ ಅವರು ಇದೊಂದು ರಾಜಕೀಯ ದೊಂಬರಾಟ ಎಂದು ಲೇವಡಿ ಮಾಡಿದ ಅವರು, ಜನರ ನೈಜ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಬದಲು ಚುನಾಯಿತ ಸದಸ್ಯರು ಇಂತಹ ರಾಜಕೀಯ ಬೆಳವಣಿಗೆಗೆ ಆದ್ಯತೆ ನೀಡಬಾರದು ಎಂಬ ಕಿವಿ ಮಾತು ಹೇಳಿದರು.
ಕಾಡಾನೆಗಳ ಸ್ಥಳಾಂತರ ವಿಚಾರದಲ್ಲಿ ಸರಕಾರ ಮತ್ತು ಅರಣ್ಯ ಇಲಾಖೆ ಕೂಡಲೇ ಮರುಪರಿಶೀಲನೆಗೆ ಮುಂದಾಗಬೇಕು. ಸರಕಾರ ಈ ಕುರಿತು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಮಲೆನಾಡು ಭಾಗದ ಜನರ ಹಿತದೃಷ್ಟಿಯಿಂದ ಸರಕಾರ ಮತ್ತೊಂದು ಉಗ್ರ ಹೋರಾಟ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು.
