NAAPTOL ಲಕ್ಕಿ ಡ್ರಾ ಹೆಸರಿನಲ್ಲಿ ರೈತನಿಗೆ ₹4.04 ಲಕ್ಷ ವಂಚನೆ: ಬಹುಮಾನದ ಆಸೆಗೆ ಬಿದ್ದು ಹಣ ಕಳೆದುಕೊಂಡ ರೈತ! | A farmer in Shivamogga lost ₹4.04 lakh in an online cyber fraud after scammers impersonated Naaptol and promised a ₹12.8 lakh lucky draw prize. CEN police have registered a case.
ಶಿವಮೊಗ್ಗ: NAAPTOL ಕಂಪನಿಯ ಲಕ್ಕಿ ಡ್ರಾದಲ್ಲಿ ₹12.80 ಲಕ್ಷ ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿ ಶಿವಮೊಗ್ಗದ ರೈತನೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ ₹4,04,600 ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರ ರೈತ ಕಳೆದ ನವೆಂಬರ್ 3ರಂದು ಮನೆಯಲ್ಲಿದ್ದಾಗ NAAPTOL ಕಂಪನಿಯ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಪತ್ರವೊಂದು ಬಂದಿದೆ. ಪತ್ರವನ್ನು ತೆರೆದು ನೋಡಿದಾಗ, NAAPTOL ಲಕ್ಕಿ ಡ್ರಾದಲ್ಲಿ ತಾವು ₹12,80,000 ಬಹುಮಾನ ಗೆದ್ದಿರುವುದಾಗಿ ನಮೂದಿಸಲಾಗಿತ್ತು.
ಇದನ್ನು ನಿಜವೆಂದು ನಂಬಿದ ರೈತ, ಪತ್ರದಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಬಹುಮಾನದ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿದ ವಂಚಕರು, ಬಹುಮಾನದ ಹಣ ಪಡೆಯಲು ಮೊದಲು ಪ್ರೊಸೆಸಿಂಗ್ ಶುಲ್ಕವಾಗಿ ₹12,800 ಪಾವತಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ರೈತ ಅವರು ಸೂಚಿಸಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ.
ಇದಾದ ಬಳಿಕವೂ ವಂಚಕರು ಸುಮ್ಮನಾಗದೆ, CGST, SGST, ಕಾರ್ಪೊರೇಟ್ ಟ್ಯಾಕ್ಸ್ ಸೇರಿದಂತೆ ವಿವಿಧ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ವಂಚಕರ ಮಾತು ನಂಬಿದ ರೈತ, ಅವರು ನೀಡಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ₹4,04,600 ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ ಇಷ್ಟೆಲ್ಲಾ ಹಣ ಪಾವತಿಸಿದರೂ ಬಹುಮಾನದ ಹಣ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ ರೈತನಿಗೆ ಅನುಮಾನ ಮೂಡಿದೆ. ಈ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿದಾಗ ತಾನು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಕೂಡಲೇ ರೈತ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
